ಪ್ರಿಯಾಂಕಾ 'ಕೈ' ಆಸ್ತಿ: ರಾಹುಲ್ ಗಾಂಧಿ

ಸೋಮವಾರ, 30 ಜನವರಿ 2017 (08:54 IST)
ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ 'ಕಾಂಗ್ರೆಸ್ ಪಕ್ಷದ ಆಸ್ತಿ' ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
 
ಸಮಾಜವಾದಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಜತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದ ರಾಹುಲ್ ಅವರು ಪ್ರಿಯಾಂಕಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರಾ ಎಂದು ಕೇಳಲಾಗಿ,  ಪ್ರಿಯಾಂಕಾ ನನಗೆ ಅಗಾಧ ಸಹಾಯ ಮಾಡಿದ್ದಾರೆ, ಆಕೆಯಿಂದಲೇ ನಾನು ಇಲ್ಲಿದ್ದೇನೆ. ಆಕೆ ಪ್ರಚಾರಕ್ಕೆ ಬರುವುದು, ಬಿಡುವುದು ಆಕೆಗೆ ಬಿಟ್ಟಿದ್ದು. ಪ್ರಿಯಾಂಕಾ ಕಾಂಗ್ರೆಸ್ ಆಸ್ತಿ ಎಂದಿದ್ದಾರೆ. 
 
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಸಮಾಜವಾದಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಪ್ರಚಾರ ಮಾಡುತ್ತಾರಾ ಎನ್ನುವ ಸವಾಲಿಗೆ ಉತ್ತರಿಸಿದ ಅವರು, ನಮ್ಮ ಚುನಾವಣಾ ಕಾರ್ಯತಂತ್ರವನ್ನು ನಾವು ಈಗಲೇ ಬಹಿರಂಗ ಪಡಿಸುವುದಿಲ್ಲ ಎಂದರು.
 
ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಬಗ್ಗೆ ಕೇಳಲಾಗಿ, ವೈಯಕ್ತಿಕವಾಗಿ ನಾನು ಮಾಯಾವತಿ ಅವರ ಬಗ್ಗೆ ಗೌರವ ಹೊಂದಿದ್ದೇನೆ. ಈ ಹಿಂದೆ ರಾಜ್ಯವನ್ನಾಳಿದ್ದ ಬಿಎಸ್‌ಪಿ ಕೆಲವು ತಪ್ಪುಗಳನ್ನು ಮಾಡಿತ್ತು. ಆದರೆ ಅವರ ಮೇಲಿನ ನನ್ನ ಗೌರವ ಹಾಗೆಯೇ ಇದೆ. ಬಿಜೆಪಿ ಮತ್ತು ಮಾಯಾವತಿ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಬಿಜೆಪಿ ದ್ವೇಷವನ್ನು ಹರಡಿ ಜನರು ಪರಷ್ಪರ ಕಾದಾಡುವಂತೆ ಮಾಡುತ್ತದೆ. ಕಮಲ ಸಿದ್ಧಾಂತದಿಂದ ದೇಶಕ್ಕೆ ಬೆದರಿಕೆ ಇದೆ. ಆದರೆ ಮಾಯಾವತಿ ಸಿದ್ಧಾಂತದಿಂದ ಯಾವುದೇ ಭಯವಿಲ್ಲ, ಎಂದಿದ್ದಾರೆ ರಾಹುಲ್. 
 
ಅಖಿಲೇಶ್ ಯಾದವ್, ರಾಜ್ಯವನ್ನು ಅಭಿವೃದ್ಧಿ ಕಡೆಗೆ ದೂಡಲು ಬಯಸುತ್ತಿದ್ದಾರೆ ಎಂದು ರಾಹುಲ್ ತಮ್ಮ ಮಿತ್ರನನ್ನು ಹೊಗಳಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ