ಲಕ್ನೋ : ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರದ ನಾಲ್ಕೂವರೆ ವರ್ಷದ ಆಡಳಿತ ಸಂಪೂರ್ಣ ಪಾರದರ್ಶಕವಾಗಿದೆ. ನಮ್ಮ ಆಡಳಿತಾವಧಿಯಲ್ಲಿ ಯಾವುದೇ ಗಲಭೆಗೆ ಅವಕಾಶ ನೀಡಲಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಗೆ ಎದುರು ನೋಡುತ್ತಿರುವ ಉ.ಪ್ರ.ದಲ್ಲಿ ಸರ್ಕಾರದ ರಿಪೋರ್ಟ್ ಕಾರ್ಡ್ ಬಿಡುಗಡೆಗೊಳಿಸಿದ ಅವರು, “ಹಿಂದಿನ ಸರ್ಕಾರವಿದ್ದಾಗ 3-4 ದಿನಗಳಿಗೊಮ್ಮೆ ಗಲಭೆ ನಡೆಯುತ್ತಿತ್ತು. ಗಲಭೆಮುಕ್ತ ಉ.ಪ್ರ.ದಲ್ಲೀಗ ಶಾಂತಿ- ಸುವ್ಯವಸ್ಥೆ ಮನೆಮಾಡಿದೆ ಎಂದರು.
ಸ್ವಂತಕ್ಕೆ ಮಹಲು ಕಟ್ಟಲಿಲ್ಲ: “ಹಿಂದಿನ ಆಡಳಿತದ ಮಂತ್ರಿಗಳು ಸರ್ಕಾರಿ ಕಟ್ಟಡಗಳನ್ನು ಒಡೆದು ತಮಗಾಗಿ ಲಕ್ಷುರಿ ಮಹಲುಗಳನ್ನು ಕಟ್ಟಿದರು. ಆದರೆ, ನಮ್ಮ ಅವಧಿಯಲ್ಲಿ ಯಾರೂ ಸ್ವಂತ ಮನೆ ನಿರ್ಮಿಸಿಕೊಳ್ಳಲಿಲ್ಲ. ಬದಲಿಗೆ, 42 ಲಕ್ಷ ಬಡವರಿಗೆ ಮನೆ ಕಟ್ಟಿಕೊಟ್ಟೆವು ಎಂದು ತಿಳಿಸಿದರು. “ಕೇಂದ್ರ ಸರ್ಕಾರದ 44 ಸ್ಕೀಮ್ಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ನಂ.1 ಸ್ಥಾನದಲ್ಲಿದೆ. 2017ರ ಚುನಾವಣೆ ವೇಳೆ ನಾವು ಪ್ರಕಟಿಸಿದ ಪ್ರಣಾಳಿಕೆಯ ಎಲ್ಲ ಆಶೋತ್ತರಗಳನ್ನೂ ಈಡೇರಿಸಿದ್ದೇವೆ ಎಂದರು.
350 ಸೀಟು ಪಕ್ಕಾ: “2022ರ ಚುನಾವಣೆಯಲ್ಲಿ ಬಿಜೆಪಿ 403 ಕ್ಷೇತ್ರಗಳ ಪೈಕಿ 350 ಸ್ಥಾನಗಳನ್ನು ನಿಶ್ಚಿತವಾಗಿ ಗೆಲ್ಲಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎದುರಾಳಿ ಪಕ್ಷಗಳಿಗೆ ಸವಾಲೆಸೆದರು. ಎಲ್ಲ ಭಾರತೀಯರ ಡಿಎನ್ಎ ಒಂದೇ:
“ಆರ್ಯರು ಹೊರಗಿನಿಂದ ಬಂದವರಲ್ಲ. ಭಾರತದ ಎಲ್ಲ ನಾಗರಿಕರ ಡಿಎನ್ಎ ಒಂದೇ ಆಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಭಾನುವಾರ ಮಹಾಂತ ದಿಗ್ವಿಜಯನಾಥರ 52ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, “ಎಡಪಂಥದ ಇತಿಹಾಸಕಾರರು ಬರೆದ, ಕುತಂತ್ರಿ ಬ್ರಿಟಿಷರ ಕುರಿತಾದ ಚರಿತ್ರೆಯನ್ನು ನಾವು ಇಂದು ಓದುವಂತಾಗಿದೆ. ಇವರು ಹೇಳುವಂತೆ ಆರ್ಯರು ಹೊರಗಿನಿಂದ ಬಂದವರಲ್ಲ. ಪಠ್ಯದಲ್ಲಿ ಓದಿದಂತೆ ನಾವು ಹೊರಗಿನವರು ಎಂದಾದರೆ, ಭರತಭೂಮಿಯನ್ನು ತಾಯಿಯಂತೆ ಪೂಜ್ಯ ದೃಷ್ಟಿಯಲ್ಲಿ ಕಾಣುವ ಭಾವ ನಮ್ಮಲ್ಲಿ ಅದ್ಹೇಗೆ ಮೂಡುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ.