ನವದೆಹಲಿ : ಭಾರತೀಯರಿಗೆ ಬೇರೆ ದೇಶದ ಮಕ್ಕಳನ್ನು ದತ್ತು ಪಡೆಯುವ ಅವಕಾಶ ಕಲ್ಪಿಸುವ ಸಲುವಾಗಿ, ಹಿಂದೂ ದತ್ತು ಸ್ವೀಕಾರ ಮತ್ತು ನಿರ್ವಹಣಾ ಕಾಯ್ದೆಗೆ (ಎಚ್ಎಎಂಎ) ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸದ್ಯಕ್ಕಿರುವ ಕಾಯ್ದೆ ಪ್ರಕಾರ, ಅನ್ಯ ದೇಶಗಳ ಮಗುವನ್ನು ದತ್ತು ಪಡೆಯಬಯಸುವ ಕುಟುಂಬ ಅಥವಾ ವ್ಯಕ್ತಿ, ದತ್ತು ಕುರಿತಾದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು (ಎನ್ಒಸಿ) ನ್ಯಾಯಾಲಯಗಳಿಂದ ಮಾತ್ರವೇ ಪಡೆಯಬೇಕಿದೆ. ತಿದ್ದುಪಡಿಯ ನಂತರ, ದತ್ತು ಪಡೆಯುವವರು, ಕೇಂದ್ರ ದತ್ತು ಸಂಪನ್ಮೂಲ ಆಯೋಗದಿಂದಲೇ (ಸಿಎಆರ್ಎ) ಎನ್ಒಸಿ ಪಡೆಯಬಹುದು.
ಅಸಲಿಗೆ, ಎಚ್ಎಎಂಎ ಕಾಯ್ದೆಯಲ್ಲಿ ಅನ್ಯ ದೇಶಗಳಿಂದ ಮಕ್ಕಳನ್ನು ದತ್ತುಪಡೆಯುವ ವಿಚಾರದಲ್ಲಿ ಯಾವುದೇ ಮಾರ್ಗಸೂಚಿಗಳಿಲ್ಲ. ಹಾಗಾಗಿಯೇ, ದತ್ತು ಪಡೆಯಲು ಇಚ್ಛಿಸುವವರು ನ್ಯಾಯಾಲಯಗಳ ಮೊರೆ ಹೋಗಬೇಕಿತ್ತು. ಅದನ್ನು ತಪ್ಪಿಸುವ ಸಲುವಾಗಿ, ಸಿಎಆರ್ಎಯಿಂದಲೇ ಪ್ರಮಾಣ ಪತ್ರ ಪಡೆಯುವಂತೆ ಮಾಡಿ, ಈ ಪ್ರಕ್ರಿಯೆಯನ್ನು ಸರಳಗೊಳಿಸಲು ತೀರ್ಮಾನಿಸಲಾಗಿದೆ. ಶುಕ್ರವಾರ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಈ ವಿಚಾರ ಉಲ್ಲೇಖೀಸಲಾಗಿದೆ.