ನವದೆಹಲಿ: ಸಂಸದೆ ಪ್ರಿಯಾಂಕಾ ಗಾಂಧಿ ಪತಿ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ ಜಾರ್ಜ್‌ಶೀಟ್ ಸಂಬಂಧ ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಮೌನ ಮುರಿದಿದ್ದಾರೆ.
ಹರಿಯಾಣದ ಶಿಕೋಪುರ್‌ನಲ್ಲಿ ಭೂ ವ್ಯವಹಾರವನ್ನು ಒಳಗೊಂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಉದ್ಯಮಿ ಪತಿ ವಿರುದ್ಧ ತನಿಖಾ ಸಂಸ್ಥೆ ಗುರುವಾರ ಪ್ರಾಸಿಕ್ಯೂಷನ್ ದೂರು ದಾಖಲಿಸಿದ ನಂತರ ಕಾಂಗ್ರೆಸ್ ನಾಯಕರ ಹೇಳಿಕೆ ಹೊರಬಿದ್ದಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಕಳೆದ ಹತ್ತು ವರ್ಷಗಳಿಂದ ನನ್ನ ಬಾವಾ ವಾದ್ರಾ ಅವರನ್ನು ಕೇಂದ್ರ ಸರ್ಕಾರ ಬೇಟೆಯಾಡುತ್ತಿದೆ. ಈ ಇತ್ತೀಚಿನ ಚಾರ್ಜ್‌ಶೀಟ್ ಆ ಬೇಟೆಯ ಮುಂದುವರಿದ ಭಾಗವಾಗಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ರಾಬರ್ಟ್, ಪ್ರಿಯಾಂಕಾ ಮತ್ತು ಅವರ ಮಕ್ಕಳೊಂದಿಗೆ ದುರುದ್ದೇಶಪೂರಿತ, ರಾಜಕೀಯ ಪ್ರೇರಿತ ನಿಂದನೆ ಮತ್ತು ಕಿರುಕುಳದ ಮತ್ತೊಂದು ಆಕ್ರಮಣವನ್ನು ಎದುರಿಸುತ್ತಿರುವಾಗ ಅವರೊಂದಿಗೆ ನಾನು ನಿಲ್ಲುತ್ತೇನೆ ಎಂದು ಬರೆದಿದ್ದಾರೆ.
ಅವರೆಲ್ಲರೂ ಯಾವುದೇ ರೀತಿಯ ಕಿರುಕುಳವನ್ನು ತಡೆದುಕೊಳ್ಳುವಷ್ಟು ಧೈರ್ಯಶಾಲಿಗಳಾಗಿದ್ದು, ಈ ಪ್ರಕರಣವನ್ನು ಘನತೆಯಿಂದ ಮುಂದುವರಿಸುತ್ತಾರೆ ಎಂದು ನನಗೆ ತಿಳಿದಿದೆ. ಸತ್ಯವು ಅಂತಿಮವಾಗಿ ಮೇಲುಗೈ ಸಾಧಿಸುತ್ತದೆ ಎಂದು 'X' ನಲ್ಲಿ ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.