ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ದೆಹಲಿ ಸಿಎಂ ಅತಿಶಿ, ಬೆಂಬಲಿಗರ ವಿರುದ್ಧ ಎಫ್‌ಐಆರ್‌

Sampriya

ಮಂಗಳವಾರ, 4 ಫೆಬ್ರವರಿ 2025 (18:26 IST)
Photo Courtesy X
ನವದೆಹಲಿ: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅತಿಶಿ ವಿರುದ್ಧದ ಪ್ರಕರಣ ದಾಖಲಾಗಿದೆ.

ಮಂಗಳವಾರ ದೆಹಲಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಮೊದಲ ಪ್ರಕರಣ ಅತಿಶಿ ವಿರುದ್ಧ ದಾಖಲಾಗಿದೆ. ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅವರ ಬೆಂಬಲಿಗರ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದೆ.

ಸೋಮವಾರ ತಡರಾತ್ರಿ ಸುಮಾರು 1 ಗಂಟೆಯ ವೇಳೆಗೆ ಗೋವಿಂದ್ ಪುರಿ ಪೊಲೀಸ್ ಠಾಣೆಯ ಮುಖ್ಯ ಪೇದೆಯ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಅವರ ಮೇಲೆ ಹಲ್ಲೆ ನಡೆಸಿದ ಅರೋಪದ ಮೇಲೆ ಆಡಳಿತಾರೂಢ ಆಪ್ ಪಕ್ಷದ ಸದಸ್ಯರಾದ ಅಶ್ಮಿತ್ ಹಾಗೂ ಸಾಗರ್ ಮೆಹ್ತಾ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಬಾ ಫತೇಹ್ ಸಿಂಗ್ ಮಾರ್ಗ್ ನಲ್ಲಿ ಬೃಹತ್ ಜನಜಂಗುಳಿ ಸೇರಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಮುಖ್ಯ ಪೇದೆ ಕೌಶಲ್ ಪಾಲ್ ರನ್ನು ಸ್ಥಳಕ್ಕೆ ಕಳಿಸಲಾಗಿತ್ತು. ಅವರು ಜನಜಂಗುಳಿಯ ವಿಡಿಯೊವನ್ನು ಚಿತ್ರೀಕರಿಸುತ್ತಿರುವಾಗ, ಅವರ ಮೇಲೆ ಆಪ್ ಸದಸ್ಯರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ, ನನ್ನ ಪ್ರತಿಸ್ಪರ್ಧಿಯಾದ ಬಿಜೆಪಿಯ ರಮೇಶ್ ಬಿಧೂರಿ ಬಹಿರಂಗವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ ಕಾರಣಕ್ಕೆ ನನ್ನನ್ನು ಶಿಕ್ಷಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರ ವಿರುದ್ಧ ಕಲ್ಕಜಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಮುಖ್ಯಮಂತ್ರಿ ಅತಿಶಿ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ಹತ್ತು ವಾಹನಗಳು ಹಾಗೂ ಸುಮಾರು 60 ಮಂದಿ ಬೆಂಬಲಿಗರೊಂದಿಗೆ ಫತೇಹ್ ಸಿಂಗ್ ಮಾರ್ಗ್ ಗೆ ಆಗಮಿಸುವ ಮೂಲಕ ಅತಿಶಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ