ಜಡೀ ಮಳೆಯಿಂದ ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ: ಉದ್ಯಾನ ಜಲಾವೃತ

Sampriya

ಶನಿವಾರ, 14 ಸೆಪ್ಟಂಬರ್ 2024 (14:00 IST)
Photo Courtesy X
ಆಗ್ರಾ:  ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರುತ್ತಿದ್ದು, ಆವರಣದಲ್ಲಿರುವ ಉದ್ಯಾನಕ್ಕೂ ನೀರು ನುಗ್ಗಿದೆ.

ತಾಜ್‌ಮಹಲ್ ಆವರಣದಲ್ಲಿರುವ ಉದ್ಯಾನ ಮುಳುಗಡೆಯ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗಿದೆ. ಆದರೆ, ಸ್ಮಾರಕಕ್ಕೆ ಯಾವುದೇ ಹಾನಿಯಾಗಿಲ್ಲ. ಡ್ರೋನ್ ಕ್ಯಾಮೆರಾ ಮೂಲಕ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಿರಿಯ ಅಧಿಕಾರಿ ರಾಜ್‌ಕುಮಾರ್ ಪಟೇಲ್ ತಿಳಿಸಿದ್ದಾರೆ.

ಗುರುವಾರ ಸಂಜೆ, 20 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸ್ಮಾರಕದ ಉದ್ಯಾನ ಮಳೆ ನೀರಿನಲ್ಲಿ ಮುಳುಗಿದೆ. ಇದು ಪ್ರವಾಸಿಗರ ಗಮನ ಸೆಳೆದಿದ್ದು, ಹೆಚ್ಚಿನ ಜನ ತಾಜ್ ಮಹಲ್ ಗೆ ಭೇಟಿ ನೀಡಿ, ವಿಡಿಯೋ ಮಾಡಿದರು.

ತಾಜ್ ಮಹಲ್ ಆಗ್ರಾ ಮತ್ತು ಇಡೀ ರಾಷ್ಟ್ರದ ಹೆಮ್ಮೆಯಾಗಿದೆ. ಇದು ನೂರಾರು ಸ್ಥಳೀಯರಿಗೆ ಮತ್ತು ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವವರಿಗೆ ಉದ್ಯೋಗ ನೀಡಿ. ಈ ಸ್ಮಾರಕದ ಬಗ್ಗೆ ಸರಿಯಾದ ಕಾಳಜಿ ವಹಿಸಬೇಕು ಎಂದು ಸರ್ಕಾರದ ಅನುಮೋದಿತ ಪ್ರವಾಸಿ ಮಾರ್ಗದರ್ಶಿ ಮೋನಿಕಾ ಶರ್ಮಾ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ