ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ತನಿಖೆ ಆರಂಭಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿಗೆ ಬೇಗೂರು ಇನ್ಸಪೆಕ್ಟರ್ ಕೃಷ್ಣ ಕುಮಾರ್ ಆಗಮಿಸಿದ್ದು, ಲಾನ್‌ನಲ್ಲಿ ಕುಳಿತಿದ್ದ ವಿಚಾರಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ಪ್ರಾಥಮಿಕ ಹಂತದ ತನಿಖೆ ನಡೆಸಲಾಗಿತ್ತು.
ರಾಜಾತಿಥ್ಯಕ್ಕೆ ಸಂಬಂಧಿಸಿದಂತೆ ಜೈಲಿನ ಹಿರಿಯ ಅಧಿಕಾರಿಗಳನ್ನು ಸೇರಿದಂತೆ ಈಗಾಗಲೇ 9 ಮಂದಿಯನ್ನು ಅಮಾನತು ಮಾಡಲಾಗಿದೆ. ತನಿಖೆ ಆರಂಭವಾಗುತ್ತಿದ್ದಂತೆ ಅವರ ಎದೆಯಲ್ಲಿ ಢವಢವ ಶುರುವಾಗಿದೆ. ಕರ್ತವ್ಯದಿಂದ ವಜಾಗೊಳ್ಳುವ ಆತಂಕ ಅವರಿಗೆ ಎದುರಾಗಿದೆ.
ಈಗಾಗಲೇ ಸೆರೆಮನೆ ವಾಸದ ಕಷ್ಟ ಅನುಭವಿಸಿರುವ ನಟ ದರ್ಶನ್ ಈ ಕುರಿತು ಜೈಲು ಸಿಬ್ಬಂದಿ ಜೊತೆ ದುಃಖ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಬೇಕಿತ್ತಾ ನಂಗೆ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ವಿಡಿಯೋ ಕಾಲ್ ಬಗ್ಗೆಯೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಹುಳಿಮಾವು ಇನ್ಸ್ ಪೆಕ್ಟರ್ ಕುಮಾರಸ್ವಾಮಿ ವಿಚಾರಣೆ ನಡೆಸಿದ್ದು, ಈ ವೇಳೆ ಮೊಬೈಲ್ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ದರ್ಶನ್ ತಿಳಿಸಿದ್ದಾರೆ.
ನನ್ನ ಪಾಡಿಗೆ ನಾನು ನನ್ನ ಕೊಠಡಿಯಲ್ಲಿ ಕುಳಿತಿದ್ದೆ. ಏಕಾಏಕಿ ನನ್ನ ಕೊಠಡಿಗೆ ಒರ್ವ ವ್ಯಕ್ತಿ ಬರುತ್ತಾನೆ. ಬಾಸ್ ನಿಮ್ಮ ಅಭಿಮಾನಿ ಬಾಸ್ ಪ್ಲೀಸ್ ಒಮ್ಮೆ ಮಾತಾಡಿ ಅಂದ್ರು. ಅಭಿಮಾನಿ ಅಲ್ವಾ ಅಂತ ನಾನು ಊಟ ಆಯ್ತಾ ಅಂದೆ. ಹೇಗಿದ್ದೀರಾ ಬಾಸ್ ಅಂದ ನಾನು ಆರಾಮಾಗಿ ಇದ್ದೀನಿ ಅಂದೆ. ಅದು ಬಿಟ್ಟರೇ ನನಗೂ ಆ ವಿಡಿಯೋ ಕಾಲ್ ಗೂ ಸಂಬಂಧ ಇಲ್ಲ. ಮೊಬೈಲ್ ತಗೊಂಡು ಬಂದ ವ್ಯಕ್ತಿ ರೌಡಿಶೀಟರ್ ಅನ್ನೋದು ನನಗೆ ಗೊತ್ತಿಲ್ಲ. ನಾನು ಜೈಲಿನಲ್ಲಿ ಯಾವುದೇ ಮೊಬೈಲ್ ಬಳಕೆ ಮಾಡ್ತಾ ಇಲ್ಲ. ಫೋನ್ ನಲ್ಲಿ ಮಾತನಾಡಿದ ವ್ಯಕ್ತಿಯೂ ಯಾರು ಅನ್ನೋದು ಗೊತ್ತಿಲ್ಲ ಎಂದು ವಿಚಾರಣೆ ವೇಳೆ ದರ್ಶನ್ ತಿಳಿಸಿದ್ದಾರೆ.