ವಯನಾಡು: ವಯನಾಡು ಲೋಕಸಭೆ ಉಪ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನೆಹರೂ ಕುಟುಂಬದ ಕುಡಿ ಪ್ರಿಯಾಂಕ ಗಾಂಧಿ ವಾದ್ರಾಗೆ ಭರ್ಜರಿ ಜಯ ಸಿಗುವ ನಿರೀಕ್ಷೆಯಿದೆ.
ವಯನಾಡಿನಲ್ಲಿ ಈ ಮೊದಲು ರಾಹುಲ್ ಗಾಂಧಿ ಎರಡು ಬಾರಿ ಸ್ಪರ್ಧಿಸಿ ಭರ್ಜರಿ ಜಯ ಗಳಿಸಿದ್ದರು. ಈ ಬಾರಿ ರಾಹುಲ್ ಎರಡು ಕಡೆ ಸ್ಪರ್ಧಿಸಿದ್ದರಿಂದ ವಯನಾಡು ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಅವರ ಸ್ಥಾನಕ್ಕೆ ಅಕ್ಕ ಪ್ರಿಯಾಂಕ ಸ್ಪರ್ಧಿಸಿದ್ದಾರೆ. ಪ್ರಿಯಾಂಕಗೆ ಇದು ಮೊದಲ ಚುನಾವಣೆಯಾಗಿದ್ದರೂ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರ ಗೆಲುವು ನಿರೀಕ್ಷಿತವೇ ಆಗಿತ್ತು.
ಇದೀಗ ಆರಂಭಿಕ ಟ್ರೆಂಡ್ ನೋಡಿದರೆ ಪ್ರಿಯಾಂಕ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವುದು ಬಹತೇಕ ನಿಶ್ಚಿತವಾಗಿದೆ. ವಯನಾಡಿನಲ್ಲಿ ಮುಸ್ಲಿಮ್ ಮತಗಳು ನಿರ್ಣಾಯಕ. ಹೀಗಾಗಿ ಇಲ್ಲಿ ಪ್ರಿಯಾಂಕಗೆ ಗೆಲುವು ನಿರೀಕ್ಷಿತ. ಆದರೆ ಭರ್ಜರಿ ಅಂತರದಿಂದ ಗೆದ್ದು ತಮ್ಮನ ಜೊತೆಗೆ ಲೋಕಸಭೆ ಪ್ರವೇಶಿಸಲಿದ್ದಾರೆ ಎನ್ನುವುದು ವಿಶೇಷ.
ಈ ಚುನಾವಣೆ ಗೆದ್ದರೆ, ತಮ್ಮ ರಾಹುಲ್, ತಾಯಿ ಸೋನಿಯಾ ಜೊತೆಗೆ ಪ್ರಿಯಾಂಕ ಕೂಡಾ ಸಂಸತ್ ಪ್ರವೇಶಿಸಲಿದ್ದಾರೆ. ಇದರೊಂದಿಗೆ ನೆಹರೂ ಕುಟುಂಬದ ಎಲ್ಲರೂ ಸಂಸತ್ ಪ್ರವೇಶಿಸಿದಂತಾಗುತ್ತದೆ. ವಯನಾಡು ಸತತವಾಗಿ ಮೂರನೇ ಬಾರಿಗೆ ನೆಹರೂ ಕುಟುಂಬಕ್ಕೆ ಮರು ಜೀವ ನೀಡುತ್ತಿದೆ.