ವಯನಾಡಿನ ಅನಾಥ ಕಂದಮ್ಮಗಳಿಗೆ ಎದೆಹಾಲು ನೀಡಲು ಮುಂದಾದ ಮಹಿಳೆಗೆ ಇದೆಂಥಾ ಕಾಮೆಂಟ್

Krishnaveni K

ಸೋಮವಾರ, 5 ಆಗಸ್ಟ್ 2024 (13:34 IST)
Photo Credit: Facebook
ವಯನಾಡು: ಗುಡ್ಡ ಕುಸಿತದಿಂದಾಗಿ ವಯನಾಡಿನಲ್ಲಿ ತಾಯಂದಿರನ್ನು ಕಳೆದುಕೊಂಡ ಎಳೆಕಂದಮ್ಮಗಳಿಗೆ ಹಾಲುಣಿಸಲು ಮುಂದೆ ಬಂದ ತಾಯಿಯೊಬ್ಬಳಿಗೆ ಸೋಷಿಯಲ್ ಮೀಡಿಯಾದಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಕಾಮೆಂಟ್ ಗಳನ್ನು ಮಾಡಲಾಗಿದೆ.

ವಯನಾಡಿನಲ್ಲಿ ತಮ್ಮ ತಾಯಂದಿರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ತನ್ನ ಎದೆಹಾಲನ್ನೇ ನೀಡಲು ರೆಡಿ ಎಂದು ಇಡುಕ್ಕಿಯ ಎರಡು ಮಕ್ಕಳ ತಾಯಿ ಭಾವನಾ ಎಂಬವರು ಮುಂದೆ ಬಂದಿದ್ದರು. ಇದಕ್ಕೆ ಆಕೆಯ ಪತಿ ಸಾಜಿನ್ ಕೂಡಾ ಸಾಥ್ ನೀಡಿದ್ದಾರೆ. ಸಾಜಿನ್ ತಮ್ಮ ಮೊಬೈಲ್ ನಂಬರ್ ನ್ನು ಪ್ರಕಟಿಸಿ, ಅಗತ್ಯವಿರುವವರು ಸಂಪರ್ಕಿಸಲು ಕರೆ ನೀಡಿದ್ದರು.

ಒಂದೊಳ್ಳೆಯ ಉದ್ದೇಶದಿಂದ ಅವರು ಈ ರೀತಿ ಮಾಡಿದ್ದರು. ಆದರೆ ಅವರ ಉದ್ದೇಶವನ್ನೇ ಎಲ್ಲರೂ ದುರುಪಯೋಗಪಡಿಸಿಕೊಂಡಿದ್ದಾರೆ. ಮೊದಲು ಅವರಿಗೆ ಮಧ್ಯರಾತ್ರಿಯಲ್ಲಿ ಯಾರೋ ಕರೆ ಮಾಡಿ ಅರ್ಜೆಂಟಾಗಿ ಇಬ್ಬರಿಗೆ ಎದೆ ಹಾಲು ಬೇಕಾಗಿದೆ ಎಂದು ಕರೆ ಮಾಡಿ ವಂಚಿಸಿದ್ದರು.

ಇದು ಇಷ್ಟಕ್ಕೇ ನಿಂತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಭಾವನಾ ಪತಿ ಸಾಜಿನ್ ಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದ್ದಾರೆ. ‘ನಿಮ್ಮ ಹೆಂಡತಿ ಏನು ಜೆರ್ಸಿ ದನವೇ? ಎಷ್ಟು ಲೀಟರ್ ಹಾಲು ಕೊಡ್ತಾಳೆ’ ಎಂದೆಲ್ಲಾ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ತಮಗೆ ಇಷ್ಟೊಂದು ಕೆಟ್ಟ ಕಾಮೆಂಟ್ ಬರುತ್ತಿದ್ದರೂ ಇದಕ್ಕೆ ತಲೆಯೇ ಕೆಡಿಸಿಕೊಳ್ಳದ ದಂಪತಿ ತಮ್ಮ ಒಳ್ಳೆಯ ಉದ್ದೇಶವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ