ಬೀದಿಯಲ್ಲೆಸೆದ ಮಗುವನ್ನು ಕಾಪಾಡಿದ ಬೀದಿನಾಯಿಗಳು

ಬುಧವಾರ, 9 ನವೆಂಬರ್ 2016 (11:13 IST)
ಬೀದಿನಾಯಿಗಳು ಮಗುವನ್ನು ರಕ್ಷಿಸಿದ ಬಗ್ಗೆ ಈ ಹಿಂದೆ ಕೆಲವೊಮ್ಮೆ ವರದಿಯಾಗಿತ್ತು. ಕಳೆದ ವಾರ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಕೂಡ ಇಂತಹದೇ ಘಟನೆ ವರದಿಯಾಗಿದೆ. ಬೀದಿಯಲ್ಲೆಯಲಾಗಿದ್ದ 7 ದಿನಗಳ ಪುಟ್ಟಮಗುವನ್ನು ಬೀದಿನಾಯಿಗಳು ರಕ್ಷಿಸಿದ್ದಾರೆ.

 
ಕಳೆದ ಶನಿವಾರ ಈ ಘಟನೆ ನಡೆದಿದ್ದು, ಪಥ್ರಾರ್ಡಿ ಪಾರಾ ನಿವಾಸಿ, ವೃತ್ತಿಯಲ್ಲಿ ಶಾಲಾ ಶಿಕ್ಷಕನಾಗಿರುವ ಉಲ್ಲಾಸ್ ಚೌಧರಿ ಎನ್ನುವವರಿಗೆ ತಮ್ಮ ನಿವಾಸದ ಹತ್ತಿರದಲ್ಲಿ ಮಗುವೊಂದು ಅಳುತ್ತಿರುವುದು ಕೇಳಿತು. ತಕ್ಷಣ ಅಲ್ಲಿಗೆ ಓಡಿ ಹೋದ ಅವರು ಕಂಡದ್ದು ಮಾತ್ರ ಊಹಿಸಲಾಗದ ದೃಶ್ಯ. ಅಲ್ಲೊಂದು ನವಜಾತ ಶಿಶುವಿತ್ತು. ಅದನ್ನು ಕುಕ್ಕಿ ತಿನ್ನಲು ಕಾಗೆಗಳು ಪ್ರಯತ್ನಿಸುತ್ತಿದ್ದವು. ಆದರೆ ಬೀದಿನಾಯಿಗಳು ಅದರ ಸುತ್ತಲೂ ಕುಳಿತುಕೊಂಡು ರಕ್ಷಣೆಗಿಳಿದಿದ್ದವು. ಮಗುವಿನ ಬಳಿ ಬರುತ್ತಿದ್ದ ಕಾಗೆಗಳನ್ನು ಅವು ಓಡಿಸುತ್ತಿದ್ದವು. 
 
ತಕ್ಷಣ ಚೌಧರಿ ಸ್ಥಳೀಯರನ್ನು ಕರೆದರು. ಅಲ್ಲಿಗೆ ಬಂದ ಜನರು ಮಗುವನ್ನೆತ್ತಿಕೊಂಡು ಹಾಲನ್ನು ಕುಡಿಸಿದರು. 
 
ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ತಲುಪಿದ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಮಗು ಆರೋಗ್ಯದಿಂದಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
 
ಶಿಕ್ಷಕ ಚೌಧರಿ ಮಗುವಿಗೆ ಸಾನಿಯಾ ಎಂದು ಹೆಸರಿಟ್ಟಿದ್ದಾರೆ. ಅದನ್ನು ರಾಜ್ಯಸರ್ಕಾರದ ಅಡಿಯಲ್ಲಿ ಬರುವ ದತ್ತು ಕೇಂದ್ರದಲ್ಲಿ ಸೇರಿಸಲಾಗಿದೆ. 
 
ನಾಯಿಗಳು ಸಕಾಲಕ್ಕೆ ಮಗುವನ್ನು ರಕ್ಷಿಸಿದಿದ್ದರೆ ಅದು ಬದುಕುಳಿಯುತ್ತಿರಲಿಲ್ಲ. ನಾಯಿಗಳಿಗೆ ನಾವು ಕೃತಜ್ಞರಾಗಿರಬೇಕು ಎನ್ನುತ್ತಾರೆ ಚೌಧರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ