ಬಡವರು ಏನು ತಿನ್ನಬೇಕು, ಆಟಾ, ಡಾಟಾ?: ಮೋದಿ ವಿರುದ್ಧ ಲಾಲು ಲೇವಡಿ

ಶನಿವಾರ, 3 ಸೆಪ್ಟಂಬರ್ 2016 (18:43 IST)
ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಉತ್ಪಾದನೆಯಾದ ರಿಲಯನ್ಸ್ ಜಿಯೋ ಜಾಹಿರಾತುಗಳಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಬಗ್ಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಲೇವಡಿ ಮಾಡಿದ್ದಾರೆ.
 
ಪ್ರಧಾನಿ ಮೋದಿ ಭಾವಚಿತ್ರವಿರುವ ಜಿಯೋ ಡಿಜಿಟಲ್ ಲೈಫ್ ಜಾಹೀರಾತು ಪತ್ರಿಕೆಗಳಲ್ಲಿ ಕಾಣಿಸಿಕೊಂಡ ನಂತರ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷ ಮೋದಿ ವಿರುದ್ಧ ನಿನ್ನೆ ವಾಗ್ದಾಳಿ ನಡೆಸಿದ್ದವು. 
 
ಇದೀಗ ಲಾಲು ಯಾದವ್ ಟ್ವೀಟ್ ಮಾಡಿ, ಬಡವರು ಏನು ತಿನ್ನಬೇಕು ಆಟಾ ಅಥವಾ ಡಾಟಾ? ಡಾಟಾ ಅಗ್ಗವಾದರೆ ಆಟಾ (ಹಿಟ್ಟು) ದುಬಾರಿಯಾಗಿದೆ. ಇದು ಮೋದಿ ದೇಶ ಬದಲಿಸುವ ತಂತ್ರ. ಒಂದು ವೇಳೆ ಮೊಬೈಲ್ ಕ್ಷೇತ್ರದಲ್ಲಿ ನೀವಿದ್ದೀರಿ ಎಂದಾದಲ್ಲಿ ಕಾಲ್ ಡ್ರಾಪ್‌ ಸಮಸ್ಯೆಗೆ ಯಾರು ಹೊಣೆ ಎನ್ನುವುದನ್ನು ಬಹಿರಂಗಪಡಿಸಿ ಎಂದು ಟ್ವೀಟ್ ಮಾಡಿದ್ದಾರೆ. 
 
ನಿನ್ನೆಯಷ್ಟೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಮೋದಿಯವರನ್ನು ಮಿಸ್ಟರ್ ರಿಲಯನ್ಸ್ ಎಂದು ಲೇವಡಿ ಮಾಡಿ ರಿಲಯನ್ಸ್‌ಗಾಗಿ ಮಾಡೆಲ್ ವೃತ್ತಿ ಮುಂದುವರಿಸುವಂತೆ ಸಲಹೆ ನೀಡಿದ್ದರು. 
 
ಏತನ್ಮಧ್ಯೆ, ರಿಲಯನ್ಸ್ ಕಂಪೆನಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಪತ್ರಿಕಾ ಜಾಹೀರಾತುಗಳಲ್ಲಿ ಬಳಸುವ ಮುನ್ನ ಪ್ರಧಾನಿ ಕಚೇರಿಯ ಅನುಮತಿ ಪಡೆದಿತ್ತೆ? ಒಂದು ವೇಳೆ ಪಡೆಯದಿದ್ದಲ್ಲಿ ರಿಲಯನ್ಸ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.
 
ಆದಾಗ್ಯೂ, ಪ್ರಧಾನಿ ಮೋದಿಯವರ 1.2 ಬಿಲಿಯನ್ ಜನತೆಯ ಡಿಜಿಟಲ್ ಇಂಡಿಯಾ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಉದ್ಘಾಟಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ