ರೇವಂತ್ ರೆಡ್ಡಿ ಕ್ಯಾಬಿನೆಟ್ ನಲ್ಲಿರುವ ‘ಸೀತಕ್ಕ’ ಯಾರು? ಆಕೆ ಬಂದಾಗ ಅಷ್ಟೊಂದು ಚಪ್ಪಾಳೆ ಯಾಕೆ?
ಶುಕ್ರವಾರ, 8 ಡಿಸೆಂಬರ್ 2023 (09:20 IST)
Photo Courtesy: Twitter
ಹೈದರಾಬಾದ್: ತೆಲಂಗಾಣದಲ್ಲಿ ನಿನ್ನೆ ಕಾಂಗ್ರೆಸ್ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗಿದೆ. ರೇವಂತ್ ರೆಡ್ಡಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ನಿನ್ನೆ ರೇವಂತ್ ರೆಡ್ಡಿ ಮತ್ತು ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಬಂದಿದ್ದರು. ಜೊತೆಗೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿರುವ ಕಾರಣ ಸಾವಿರಾರು ಸಂಖ‍್ಯೆಯಲ್ಲಿ ಕಾರ್ಯಕರ್ತರೂ ಹಾಜರಿದ್ದರು.
ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಅವರ ಜೊತೆಗೆ 11 ಮಂದಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಅವರಲ್ಲಿ ಒಬ್ಬರು ಸೀತಕ್ಕ ಎಂದೇ ಜನಪ್ರಿಯರಾಗಿರುವ ದಾನಾ ಅನಸೂಯ.
ಮುಳುಗು ವಿಧಾನಸಭೆ ಕ್ಷೇತ್ರದಿಂದ ಗೆದ್ದು ಬಂದ ಸೀತಕ್ಕ ಹೆಸರನ್ನು ಪ್ರಮಾಣ ಸ್ವೀಕರಿಸಲು ಕರೆದಾಗ ಜನರಿಂದ ಭಾರೀ ಕರಾಡತನ ಕಂಡುಬಂತು. ಹೀಗಾಗಿ ಈ ಸೀತಕ್ಕ ಯಾರು ಎಂಬ ಕುತೂಹಲ ಎಲ್ಲರಿಗೂ ಆಗುವುದು ಸಹಜ.
ಸಿಎಂ ರೇವಂತ್ ರೆಡ್ಡಿಯವರು ತಮ್ಮ ಸಹೋದರಿಯಂತೇ ಗೌರವಿಸುವ ಸೀತಕ್ಕ ಮುಳುಗು ಜಿಲ್ಲೆಯವರು. ಬುಡಕಟ್ಟು ಜನಾಂಗಕ್ಕೆ ಸೇರಿದ ಅವರನ್ನು ರೇವಂತ್ ರೆಡ್ಡಿ ಅಕ್ಕ ಎಂದೇ ಕರೆಯುತ್ತಾರೆ. ರಾಜಕೀಯಕ್ಕೆ ಬರುವ ಮೊದಲು ಸೀತಕ್ಕ ನಕ್ಸಲ್ ಗುಂಪಿನ ಜೊತೆ ಗುರುತಿಸಿಕೊಂಡಿದ್ದರು. ಬಳಿಕ ನಕ್ಸಲ್ ತ್ಯಜಿಸಿ ವಕೀಲಿ ಪದವಿ ಮತ್ತು ರಾಜಕೀಯ ವಿಜ್ಞಾನದಲ್ಲಿ ಪಿಎಚ್.ಡಿ ಪದವಿ ಪಡೆದರು. ಇದೀಗ ತಮ್ಮ ತವರು ಜಿಲ್ಲೆಯಲ್ಲೇ ಚುನಾವಣೆ ಗೆದ್ದು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.