ಭಾರತದ ಮೇಲೆ 50 ಶೇಕಡಾ ಸುಂಕದ ಬರೆ ಹಾಕಿದ ಡೊನಾಲ್ಡ್ ಟ್ರಂಪ್
ರಷ್ಯಾ ಜೊತೆಗೆ ತೈಲ ಖರೀದಿ ನಿಲ್ಲಿಸದೇ ಇದ್ದರೆ ಭಾರತಕ್ಕೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ಅದರಂತೆ ಮೊದಲು 25% ಸುಂಕ ವಿಧಿಸಿದ್ದರು. ಆದರೂ ಭಾರತ ಕ್ಯಾರೇ ಎನ್ನದೇ ಇದ್ದಾಗ ನಿನ್ನೆ ಇನ್ನಷ್ಟು ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದರು.
ಅದರಂತೆ ಈಗ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ50 ರಷ್ಟು ಸುಂಕ ವಿಧಿಸುವ ಘೋಷಣೆ ಮಾಡಿದ್ದಾರೆ. ರಷ್ಯಾ ಜೊತೆಗೆ ನಮ್ಮ ವ್ಯಾಪಾರ ಒಪ್ಪಂದ ಎಂದಿನಂತೆ ಮುಂದುವರಿಯಲಿದೆ ಎಂದು ಭಾರತ ಘೋಷಣೆ ಮಾಡಿದ್ದು ಅಮೆರಿಕಾ ಅಧ್ಯಕ್ಷರನ್ನು ಕೆರಳಿಸಿತ್ತು.
ಇದೀಗ ತನ್ನ ಮಾತು ಕೇಳದ ರಾಷ್ಟ್ರಗಳ ಮೇಲೆಲ್ಲಾ ಡೊನಾಲ್ಡ್ ಟ್ರಂಪ್ ಟಾರಿಫ್ ಅಸ್ತ್ರ ಬಿಡುತ್ತಿದ್ದಾರೆ. ಟ್ರಂಪ್ ಬೆದರಿಕೆಗೆ ಭಾರತ ಕ್ಯಾರೇ ಎನ್ನದೇ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದೆ.