ಪ್ರಧಾನಿಯನ್ನು ಯಾರು ಕೊಲ್ಲುತ್ತಾರೆ?: ಆನಂದ ಶರ್ಮಾ

ಗುರುವಾರ, 17 ನವೆಂಬರ್ 2016 (16:29 IST)
ದೊಡ್ಡ ಮುಖಬೆಲೆಯ ನೋಟು ನಿಷೇಧ ಮಾಡಿದ್ದಕ್ಕೆ ಕೆಲವರು ನನ್ನನ್ನು ಕೊಲ್ಲ ಬಯಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಆನಂದ ಶರ್ಮಾ ನಿಮ್ಮನ್ನು ಕೊಲ್ಲಲು ಬಯಸುವವರು ಯಾರು ಎಂದು ಸ್ಪಷ್ಟ ಪಡಿಸಿ ಎಂದಿದ್ದಾರೆ. 
 
ರಾಜ್ಯಸಭೆಯಲ್ಲಿ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆರಂಭವಾದ ಚರ್ಚೆಯ ನೇತೃತ್ವ ವಹಿಸಿ ಮಾತನಾಡುತ್ತಿದ್ದ ಶರ್ಮಾ, ಮೋದಿ  ಅವರು ಗೋವಾದಲ್ಲಿ ಆಡಿದ್ದ ಮಾತುಗಳನ್ನು ಉಲ್ಲೇಖಿಸಿ, ನಿಮ್ಮನ್ನು ಹತ್ಯೆಗೈಯ್ಯಲು ಬಯಸುತ್ತಿರುವವರು ಯಾರು ಪ್ರಧಾನಿ ಅವರೇ? ಇದು ಯಾರ ಪಿತೂರಿ? ಇದರ ಹಿಂದಿರುವ ಸಂಘಟನೆ ಯಾವುದು? ದೇಶವಾಸಿಗಳು ಇದನ್ನು ತಿಳಿಯಬಯಸಿದ್ದಾರೆ. ಪ್ರಧಾನಿ ಮತ್ತು ಗೃಹ ಸಚಿವರು ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. 
 
ನಾವು ಪ್ರಧಾನಿ ಬಹುಕಾಲ ಬದುಕಬೇಕೆಂದು ಬಯಸಿದ್ದೇವೆ. ನಿಮ್ಮ ವಿರುದ್ಧ ಸಂಚು ಹೂಡುತ್ತಿರುವವರ ಹೆಸರನ್ನು ಸಂಸತ್ತಿಗೆ, ದೇಶಕ್ಕೆ ತಿಳಿಸಿ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಶರ್ಮಾ ವ್ಯಂಗ್ಯವಾಡಿದ್ದಾರೆ. 
 
ಕಳೆದ ಭಾನುವಾರ ಪಣಜಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ದೇಶದಲ್ಲಿ ಕೆಲವೊಂದು ವಿರೋಧಿ ಶಕ್ತಿಗಳು ನನ್ನನ್ನು ಮುಗಿಸಲು ಸಂಚು ರೂಪಿಸುತ್ತಿವೆ. ಆದರೆ ನಾನದಕ್ಕೆ ಜಗ್ಗುವುದಿಲ್ಲ ಎಂದು ಹೇಳಿದ್ದರು. 

ವೆಬ್ದುನಿಯಾವನ್ನು ಓದಿ