ಇತ್ತೀಚಿಗೆ ದೇಶದೆಲ್ಲೆಡೆ ಮಹಿಳೆಯರ ಮೇಲಿನ ಅತ್ಯಾಚಾರ, ಕಿರುಕುಳದ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಹಾಡಹಗಲೇ ಕರ್ತವ್ಯ ನಿರತ ಪೊಲೀಸ್ ಒಬ್ಬರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದು, ಇದರಿಂದ ಕೋಪಗೊಂಡ ಮಹಿಳೆ ಪೊಲೀಸಪ್ಪನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಹರಿಯಾಣಾದಲ್ಲಿ ಬೆಳಕಿಗೆ ಬಂದಿದೆ. ಅದರ ಕುರಿತಾದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪೊಲೀಸ್ ಇಲಾಖೆಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಇತ್ತೀಚಿಗೆ ಹರಿಯಾಣದಲ್ಲಿ ನೆಡೆದಿರುವ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಪೊಲೀಸರೊಬ್ಬರು ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿರುವುದು ಬಾರಿ ಟೀಕೆಗೆ ಗುರಿಯಾಗಿದೆ. ಅಷ್ಟೇ ಅಲ್ಲ, ಹರಿಯಾಣ ಪೊಲೀಸರು ಜನವರಿ ತಿಂಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ತನಿಖೆ ನಡೆಸುತ್ತಿದ್ದು ಈ ಘಟನೆಯಿಂದ ಸ್ವತಃ ಹರಿಯಾಣ ಪೊಲೀಸರೇ ತಲೆ ತಗ್ಗಿಸುವ ಸ್ಥಿತಿ ಇದೀಗ ನಿರ್ಮಾಣವಾಗಿದೆ.
ಈ ಘಟನೆ ನಡೆದ ಸಂದರ್ಭದಲ್ಲಿ ಸಾಕಷ್ಟು ಜನರು ಸೇರಿದ್ದು ಇನ್ನು ಮುಂದೆ ಈ ತರಹದ ಅನುಚಿತ ವರ್ತನೆ ತೋರದಂತೆ ಪೊಲೀಸಪ್ಪನಿಗೆ ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಈ ಘಟನೆಯು ಹರಿಯಾಣಾ ರಾಜ್ಯದ ಹಿಸಾರ್ ಜಿಲ್ಲೆಯ 4 ನೇ ವಲಯದಲ್ಲಿ ನೆಡೆದಿದ್ದು, ಈ ಘಟನೆ ವೇಳೆ ಅಲ್ಲಿದ್ದ ಸ್ಥಳೀಯರು ಈ ಎಲ್ಲಾ ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರಿಸಿದ್ದಾರೆ ಎನ್ನಲಾಗಿದೆ.