ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಸಿಗಬೇಕಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯು ಮತ್ತೊಮ್ಮೆ ತಡವಾಗಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಉತ್ಪಾದಿಸಿರುವ ಕೋವ್ಯಾಕ್ಸಿನ್ ಅನ್ನು ಇನ್ನಷ್ಟು ತಾಂತ್ರಿಕ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಕೋವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆಗೆ ಅನುಮತಿ ಪಡೆಯಲು ಅಗತ್ಯವಿರುವ ಎಲ್ಲಾ ದತ್ತಾಂಶಗಳನ್ನು ಪೂರೈಸಿದ ಬಳಿಕವೂ ಹೀಗೆ ಆಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
"ಇದು ಸಾಮಾನ್ಯವಾದ ಪ್ರಕ್ರಿಯೆ. ತಜ್ಞರು ಕೇಳುವ ಪ್ರಶ್ನೆಗಳಿಗೆ ಕಂಪನಿಗಳು ಉತ್ತರಿಸಬೇಕು," ಎಂದು ಹೆಸರು ಹೇಳಲಿಚ್ಛಿಸದ, ವಿಷಯವನ್ನು ಹತ್ತಿರದಿಂದ ಬಲ್ಲ, ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶ್ವ ಸಂಸ್ಥೆಯಿಂದ ತುರ್ತು ಬಳಕೆ ಅನುಮತಿ ಇಲ್ಲದೇ ಇದ್ದ ಸಂದರ್ಭದಲ್ಲಿ ಬಹುತೇಕ ದೇಶಗಳು ಕೋವ್ಯಾಕ್ಸಿನ್ ಅನ್ನು ಮಾನ್ಯ ಮಾಡದ ಕಾರಣ ಈ ಲಸಿಕೆ ಪಡೆದ ಭಾರತೀಯರಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ತೊಡಕಾಗಲಿದೆ.
ಭಾರತ್ ಬಯೋಟೆಕ್ನ ದತ್ತಾಂಶದ ಪ್ರಕಾರ ಕೋವ್ಯಾಕ್ಸಿನ್ನ ಮೂರನೇ ಹಂತದ ಪ್ರಯೋಗವು 77.8% ಪ್ರಭಾವಶಾಲಿಯಾಗಿದೆ. ಇಲ್ಲಿವರೆಗೂ ಫೈಜ಼ರ್-ಬಯೋಎನ್ಟೆಕ್, ಜಾನ್ಸನ್ & ಜಾನ್ಸನ್, ಮೊಡೆರ್ನಾ, ಚೀನಾದ ಸಿನೋಫಾರ್ಮ್ ಮತ್ತು ಆಕ್ಸ್ಫರ್ಡ್-ಅಸ್ಟ್ರಾಜ಼ೆಂಕಾ ಅಭಿವೃದ್ಧಿಪಡಿಸಿದ ಲಸಿಕೆಗಳಿಗೆ ಮಾತ್ರವೇ ವಿಶ್ವ ಸಂಸ್ಥೆ ತುರ್ತು ಬಳಕೆಗೆ ಅನುಮತಿ ಕೊಟ್ಟಿದೆ.
ಭಾರತ ಮದ್ದು ನಿಯಂತ್ರಣ ಪ್ರಾಧಿಕಾರದಿಂದ ತುರ್ತು ಬಳಕೆ ಅನುಮತಿ ಪಡೆದ ಆರು ಲಸಿಕೆಗಳಲ್ಲಿ ಕೋವ್ಯಾಕ್ಸಿನ್ ಒಂದಾಗಿದೆ. ಇದರೊಂದಿಗೆ ಕೋವಿಶೀಲ್ಡ್ ಹಾಗೂ ರಷ್ಯಾದ ಸ್ಪುಟ್ನಿಕ್ ಗಿ ಲಸಿಕೆಗಳೂ ಕೋವಿಡ್ ವಿರುದ್ಧದ ಹೋರಾಟದಲ್ಲಿ ಬಳಕೆಯಾಗುತ್ತಿವೆ.