ಅಜ್ಮೇರ್ ಸ್ಫೋಟ ತಪ್ಪೊಪ್ಪಿಗೆಗೆ ಪೊಲೀಸ್ ಕಿರುಕುಳ: ಅಸೀಮಾನಂದ

ಗುರುವಾರ, 31 ಮಾರ್ಚ್ 2011 (13:15 IST)
ಅಜ್ಮೇರ್ ಶರೀಫ್, ಮೆಕ್ಕಾ ಮಸೀದಿ, ಮಾಲೆಗಾಂವ್ ಮತ್ತು ಸಮ್‌ಝೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆನ್ನಲಾದ ಸ್ವಾಮೀ ಅಸೀಮಾನಂದ, ಇದೀಗ, ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ಗಳು ತಪ್ಪೊಪ್ಪಿಗೆ ಹೇಳಿಕೆ ನೀಡುವಂತೆ ತೀವ್ರ ಒತ್ತಡ ಹೇರಿದವು ಎಂದು ಹೇಳುವ ಮೂಲಕ ಹೇಳಿಕೆ ಬದಲಾಯಿಸಿದ್ದಾರೆ.

ಅಜ್ಮೇರ್ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭ ನ್ಯಾಯಾಲಯಕ್ಕೆ ಸಲ್ಲಿಸಿರುವ ಪತ್ರದಲ್ಲಿ ಸ್ವಾಮಿ ಅಸೀಮಾನಂದ, "ಸ್ಫೋಟಗಳಲ್ಲಿ ಕೈವಾಡವಿರುವುದಾಗಿ ತಪ್ಪೊಪ್ಪಿಕೊಳ್ಳುವಂತೆ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತನಿಖಾ ದಳಗಳು ಒತ್ತಡ ಹೇರಿದವು" ಎಂದು ಹೇಳಿದ್ದಾರೆ.

ಘಟನೆಯಲ್ಲಿ ಸರಕಾರಿ ಸಾಕ್ಷಿಯಾಗಲು ಬೆದರಿಕೆಯೊಡ್ಡಲಾಗಿದೆ ಮತ್ತು ಒತ್ತಡ ಹೇರಲಾಗುತ್ತಿದೆ ಎಂದಿರುವ ಅಸೀಮಾನಂದ, ಅಜ್ಮೇರ್ ಪ್ರಕರಣದಲ್ಲಿ ಸಾಕ್ಷಿಯಾಗಲು ಒಪ್ಪಿಕೊಂಡಿದ್ದೇನೆ ಎಂದು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಕುಟುಂಬ ಸದಸ್ಯರನ್ನೂ ತನಿಖಾ ಏಜೆನ್ಸಿಗಳು ಈ ಪ್ರಕರಣದಲ್ಲಿ ಸಿಲುಕಿಸಿವೆ ಎಂದು ಆರೋಪಿಸಿದ ಅವರು, ಸಮ್‌ಝೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟದಲ್ಲಿ ಕೈವಾಡ ಹೊಂದಿರುವ ತಪ್ಪೊಪ್ಪಿಗೆಗಾಗಿಯೂ ತನ್ನ ಮೇಲೆ ತೀವ್ರ ಒತ್ತಡ ಹೇರಲಾಯಿತು. ಇದಲ್ಲದೆ, ತನ್ನ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿಕೊಳ್ಳುವುದಕ್ಕೂ ರಾಜಸ್ಥಾನ ಎಟಿಎಸ್ ಪೊಲೀಸರು ಅವಕಾಶ ಕೊಡಲಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಪತ್ರದಲ್ಲಿ ಅಸೀಮಾನಂದ ತಿಳಿಸಿದ್ದಾರೆ.

ಇದೇ ರೀತಿಯಾಗಿ, ತನಿಖಾ ಏಜೆನ್ಸಿಗಳ ಕಿರುಕುಳದ ಕುರಿತು, ಅಜ್ಮೇರ್ ಸ್ಫೋಟದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಲು ಒತ್ತಡ ಹೇರುತ್ತಿವೆ ಎಂದು ರಾಷ್ಟ್ರಪತಿಗೂ ಅಸೀಮಾನಂದ ಪತ್ರ ಬರೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಇದೇ ವೇಳೆ, ಅಸೀಮಾನಂದ ಮತ್ತು ಬಂಧಿತ ಇತರರ ಮೇಲೆ ಚಾರ್ಜ್ ಶೀಟ್ ದಾಖಲಿಸುವಲ್ಲಿ ತನಿಖಾ ದಳಗಳು ಮತ್ತೆ ವಿಫಲವಾಗಿದ್ದು, ಮತ್ತಷ್ಟು ಸಮಯಾವಕಾಶ ಕೋರಿವೆ. ಮುಂದಿನ ವಿಚಾರಣೆ ಏಪ್ರಿಲ್ 8ಕ್ಕೆ ನಿಗದಿಯಾಗಿದೆ.

ಪ್ರಸ್ತುತ ಅಜ್ಮೇರ್ ಸ್ಫೋಟ ಪ್ರಕರಣವನ್ನು ರಾಜಸ್ಥಾನ ಎಟಿಎಸ್ ನಡೆಸುತ್ತಿದ್ದು, ತನಿಖೆಯನ್ನು ಎನ್ಐಎ ಕೈಗೊಪ್ಪಿಸಿ ಮಂಗಳವಾರ ಸರಕಾರವು ಆದೇಶ ಹೊರಡಿಸಿತ್ತು.

ವೆಬ್ದುನಿಯಾವನ್ನು ಓದಿ