ಕಾರಣ ಕೇಳದೆ ಅಧಿಕಾರಿಯನ್ನು ವಜಾ ಮಾಡ್ಬಹುದು: ಸುಪ್ರೀಂ

ಶುಕ್ರವಾರ, 1 ಏಪ್ರಿಲ್ 2011 (09:52 IST)
ರಾಷ್ಟ್ರದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ದೇಶದ ಸಂವಿಧಾನದ ವಿಶೇಷ ಅಧಿಕಾರವನ್ನು ಬಳಸಿಕೊಂಡು ಯಾವುದೇ ಅಧಿಕಾರಿಯನ್ನು ವಿಚಾರಿಸದೆ ಅಥವಾ ವಿವರಣೆ ಕೇಳದೆ ವಜಾ ಮಾಡಬಹುದು ಎಂದು ಸರ್ವೋಚ್ಚನ್ಯಾಯಾಲಯ ತಿಳಿಸಿದ್ದು, ಚೀನಾದಲ್ಲಿ ನಿಯೋಜನೆಗೊಂಡಿದ್ದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ವಜಾ ಮಾಡಿದ ಕ್ರಮವನ್ನು ಎತ್ತಿಹಿಡಿದಿದೆ.

ನ್ಯಾಯಮೂರ್ತಿಗಳಾದ ಮುಕುಂದಂ ಶರ್ಮಾ ಮತ್ತು ಎ.ಆರ್.ದವೆ ಅವರನ್ನೊಳಗೊಂಡ ಸುಪ್ರೀಂ ಪೀಠ,ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರುವ, ವಿಶೇಷ ಸಂದರ್ಭದಂತಹ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವ ಅಧಿಕಾರ ಹೊಂದಿರುವ ಅಧಿಕಾರಿಯನ್ನು ಯಾವುದೇ ಕಾರಣ ನೀಡದೆ ವಜಾ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನದ 311ನೇ ಕಲಂ ಅನ್ನು ಉದಾಹರಿಸಿದ ಪೀಠ ವಿಶೇಷ ಹಾಗೂ ವಿಶಿಷ್ಟ ಸಂದರ್ಭಗಳಲ್ಲಿ ಉಪನಿಯಮ(ಎ)(ಬಿ) ಮತ್ತು (ಸಿ) ಪ್ರಕಾರ ಅಧಿಕಾರವನ್ನು ಉಪಯೋಗಿಸಬಹುದಾಗಿದೆ. ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರಿಗೆ ವಜಾಶಿಕ್ಷೆ ವಿಧಿಸಿರುವುದಕ್ಕೆ ಕಾರಣಗಳನ್ನು ವಿವರಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದೆ.

ತಮ್ಮ ಕರ್ತವ್ಯ ನಿರ್ವಹಣೆಯ ಭಾಗವಾಗಿ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರಿ ಉಪನಿಯಮ (ಎ)(ಬಿ) ಮತ್ತು (ಸಿ) ಪ್ರಕಾರ ವಜಾ ಶಿಕ್ಷೆ ನೀಡಿದ್ದ ಬಗ್ಗೆ ಕಾರಣಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಪೀಠ ತಿಳಿಸಿದೆ.

ರಾಜತಾಂತ್ರಿಕ ಅಧಿಕಾರಿ ಎಂ.ಎಂ.ಶರ್ಮಾ ಅವರನ್ನು ವಜಾ ಮಾಡಿದ ಬಗ್ಗೆ ವಿಸ್ತ್ರತ ವಿವರಣೆ ನೀಡಬೇಕು ಎಂಬ ದಿಲ್ಲಿ ಹೈಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಮೊದಲ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಶರ್ಮಾ ಆತಿಥೇಯ ರಾಷ್ಟ್ರದಲ್ಲಿ ವಿದೇಶಿ ಪ್ರಜೆಗಳ ಜತೆ ಅನಧಿಕೃತ ಮತ್ತು ಅನಗತ್ಯ ಸಂಬಂಧ ಹೊಂದಿದ್ದರು ಎಂಬ ಆರೋಪ ಹೊರಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ