ಕೆಲಸದಾಕೆ ಮೇಲೆ ಅತ್ಯಾಚಾರ: ನಟ ಶೈನಿಗೆ 7 ವರ್ಷ ಜೈಲು

ಗುರುವಾರ, 31 ಮಾರ್ಚ್ 2011 (08:46 IST)
ಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಾಲಿವುಡ್ ನಟ ಶೈನಿ ಅಹುಜಾಗೆ ತ್ವರಿತ ನ್ಯಾಯಾಲಯವೊಂದು 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ವಿಚಾರಣೆಯ ಅವಧಿಯಲ್ಲಿ ಕೆಲಸದಾಕೆ ತನ್ನ ಹೇಳಿಕೆ ಬದಲಿಸಿದ್ದಳೆಂಬುದು ಇಲ್ಲಿ ಗಮನಾರ್ಹ. ಈ ಕುರಿತು ತೀರ್ಪು ನೀಡಿದ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿ.ಎಂ.ಚೌಹಾಣ್ ಪೊಲೀಸ್ ಎಫ್ಐಆರ್ (ಪ್ರಾಥಮಿಕ ವರದಿ)ಯನ್ನೇ ಆಧಾರವಾಗಿಟ್ಟುಕೊಂಡಿದ್ದರು. ವಿಚಾರಣೆಯು ಕ್ಯಾಮರಾದ ಮುಂದೆ ನಡೆದಿತ್ತು. ತೀರ್ಪು ಪ್ರಕಟಿಸುವಾಗ 38ರ ಹರೆಯದ ಶೈನಿ ಅಹುಜಾ ತಮ್ಮ ಪತ್ನಿ ಅನುಪಮ್ ಜೊತೆ ನ್ಯಾಯಾಲಯದಲ್ಲಿ ಹಾಜರಿದ್ದರು ಮತ್ತು ತೀರ್ಪು ಹೊರಬಿದ್ದಾಗ ಅವರ ಕಣ್ಣುಗಳಲ್ಲಿ ನೀರು ಬಂತು ಎಂದು ಪೊಲೀಸರು ಹೇಳಿದ್ದಾರೆ.

ಶೈನಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪವನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಹಿಂತೆಗೆದುಕೊಂಡಿದ್ದರು. ಇಂಥದ್ದೊಂದು ಘಟನೆಯೇ ನಡೆದಿರಲಿಲ್ಲ ಎಂದಿದ್ದಳಾಕೆ. ಶೈನಿ ನಿವಾಸದಲ್ಲಿ ತನಗೆ ಕೆಲಸ ಕೊಡಿಸಿದ್ದ ಮಹಿಳೆಯು ಹೇಳಿದಂತೆ ತಾನು ಈ ಹಿಂದೆ ಶೈನಿ ವಿರುದ್ಧ ಕೇಸು ದಾಖಲಿಸಿದ್ದೆ ಎಂದಿದ್ದಳು 20ರ ಹರೆಯದ ಕೆಲಸದಾಕೆ.

2009ರ ಜೂನ್ ತಿಂಗಳಲ್ಲಿ ಶೈನಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಜೂನ್ 14ರಂದು ಶೈನಿಯನ್ನು ಬಂಧಿಸಲಾಗಿತ್ತು ಮತ್ತು ಮೂರು ತಿಂಗಳ ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್ 3ರಂದು, ಕೆಲಸದಾಕೆಯು ನ್ಯಾಯಾಲಯದಲ್ಲಿ ಶೈನಿಯನ್ನು ಗುರುತಿಸಿದಳಾದಳೂ, ಅತ್ಯಾಚಾರ ಪ್ರಕರಣವೇ ನಡೆದಿರಲಿಲ್ಲ ಎಂದು ದಿಢೀರ್ ಹೇಳಿಕೆ ಬದಲಿಸಿದ್ದಳು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಕೆಯನ್ನು ತಿರುಗಿಬಿದ್ದ ಸಾಕ್ಷಿ ಎಂದು ಘೋಷಿಸಿತ್ತು.

ವೆಬ್ದುನಿಯಾವನ್ನು ಓದಿ