ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರೂ ಆಗಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕೃಷಿ ಸಚಿವ ಶರದ್ ಪವಾರ್ ಅವರಿಗೆ 2ಜಿ ಹಗರಣದ ಕುಖ್ಯಾತ ಆರೋಪಿ ಮತ್ತು ಡಿಬಿ ರಿಯಾಲ್ಟಿ ಪ್ರೊಮೋಟರ್ ಶಹೀದ್ ಬಲ್ವಾ ಜೊತೆ ಸಂಬಂಧವಿದೆ ಎಂಬ ಅಂಶವು ಗುರುವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಅಧ್ಯಕ್ಷ ಪವಾರ್, ಪ್ರಫುಲ್ ಪಟೇಲ್ ಸಹಿತ ಹಲವು ಎನ್‌ಸಿಪಿ ಮುಖಂಡರು ಬಲ್ವಾನಿಂದ ವಿಮಾನದ ಸಹಾಯ ಪಡೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ, ಬಿಜೆಪಿಯ ಏಕನಾಥ ಖಾಡ್ಸೆ ಅವರು ಆರೋಪಿಸಿದರು.
ಕಳೆದ ಫೆಬ್ರವರಿಯಲ್ಲಿ ಬಲ್ವಾ ಮತ್ತಾತನ ಪಾಲುದಾರ ವಿನೋದ್ ಗೊಯೆಂಕಾ ಜೊತೆಗೇ ಪವಾರ್ ದುಬೈಗೆ ವಿಮಾನದಲ್ಲಿ ಪ್ರಯಾಣಿಸಿದ್ದರು. ಈ ಸಂದರ್ಭ ಪವಾರ್ ಅವರ ಪತ್ನಿ ಪ್ರತಿಭಾ, ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಮತ್ತು ಪತ್ನಿ ವರ್ಷಾ, ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಐ.ಎಸ್.ಬಿಂದ್ರಾ ಹಾಗೂ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೂನ್ ಲೋರ್ಗಟ್ ಇದ್ದರು ಎಂದೂ ಬಿಜೆಪಿ ಮುಖಂಡರು ಆರೋಪಿಸಿದರು.