ಕ್ರಿಕೆಟಿಗೆ 45 ಕೋಟಿ ತೆರಿಗೆ ವಿನಾಯಿತಿ: ಕ್ರೀಡಾ ಮಂತ್ರಿಗೇ ಆಘಾತ
ಶುಕ್ರವಾರ, 1 ಏಪ್ರಿಲ್ 2011 (13:37 IST)
ಈಗ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಕೂಟಕ್ಕೆ 45 ಕೋಟಿ ರೂಪಾಯಿ ಆದಾಯ ತೆರಿಗೆ ವಿನಾಯಿತಿ ಘೋಷಿಸಿರುವ ತಮ್ಮದೇ ಸರಕಾರದ ಕ್ರಮವನ್ನು ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕೆನ್ ಖಂಡಿಸಿದ್ದಾರೆ.
ಸರಕಾರವು ದೇಶದ ಕ್ರೀಡಾ ಬಜೆಟ್ ಅನುದಾನವನ್ನು ತಗ್ಗಿಸುತ್ತಿರುವಾಗಲೇ ಈ ಕ್ರಮ ಕೈಗೊಂಡಿರುವುದು ಅವರ ಆಘಾತಕ್ಕೆ ಕಾರಣವಾಗಿದೆ. ಇದಲ್ಲದೆ, ದುಡ್ಡಿನ ಹೊಳೆಯೇ ಹರಿಯುತ್ತಿರುವ ಕ್ರಿಕೆಟಿಗೆ ಈ ರೀತಿ ಮಾಡಿರುವುದರಿಂದ, ಇನ್ನು ಉಳಿದ ಕ್ರೀಡಾ ಕ್ಷೇತ್ರಗಳ ಅಧಿಕಾರಿಗಳೂ ಸಹಜವಾಗಿ ಇದೇ ರೀತಿಯ ತೆರಿಗೆ ವಿನಾಯಿತಿಯನ್ನು ಬಯಸುತ್ತಾರೆ ಎಂದಿದ್ದಾರೆ ಅವರು.
ಈಗಿನ ವಿಶ್ವಕಪ್ ಕ್ರಿಕೆಟ್ ಕೂಟದ ಆದಾಯದಲ್ಲಿ ಅಂತಾರಾಷ್ಟ್ರಿಯೀ ಕ್ರಿಕೆಟ್ ಮಂಡಳಿಗೆ 45 ಕೋಟಿ ರೂಪಾಯಿ ತೆರಿಗೆ ವಿನಾಯಿತಿಯನ್ನು ಘೋಷಿಸಿ ಕೇಂದ್ರ ಸರಕಾರ ಗುರುವಾರ ಆದೇಶ ಹೊರಡಿಸಿತ್ತು. ಐಸಿಸಿ ಅಧ್ಯಕ್ಷರೂ ಆಗಿರುವ ಕೃಷಿ ಸಚಿವ ಹಾಜರಿದ್ದ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು.
ವಿತ್ತ ಸಚಿವಾಲಯ ಅಧಿಕಾರಿಗಳ ಪ್ರಕಾರ, ಈಗ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಕೂಟದಿಂದ ಐಸಿಸಿಗೆ ಬರುವ ಆದಾಯವು ಅಂದಾಜು 1476 ಕೋಟಿ ರೂಪಾಯಿ ಹಾಗೂ ಕ್ರೀಡಾಕೂಟ ಸಂಘಟಿಸಲು ಖರ್ಚಾಗಿರುವ ಹಣ ಸುಮಾರು 571 ಕೋಟಿ ರೂಪಾಯಿ.
ಹಣದ ಹೊಳೆಯೇ ಹರಿಯುತ್ತಿರುವ ಈ ಕ್ರಿಕೆಟ್ ಕೂಟಕ್ಕೆ ತೆರಿಗೆ ವಿನಾಯಿತಿಯ ಅಗತ್ಯವೇ ಇಲ್ಲ ಎಂಬಷ್ಟು ಶ್ರೀಮಂತವಾಗಿದೆ ನಮ್ಮ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ. ಆದರೂ, ಈ ಭಾರೀ ಪ್ರಮಾಣದ ತೆರಿಗೆಗೆ ವಿನಾಯಿತಿ ನೀಡಿರುವುದು ಹುಬ್ಬೇರಿಸಲು ಕಾರಣವಾಗಿದೆ.