'ಗಂಡ ಪೀಡಿಸಿದರೂ ಭಾರತೀಯ ಮಹಿಳೆ ಸುಮ್ಮನಿರುತ್ತಾಳೆ'

ಸೋಮವಾರ, 28 ಮಾರ್ಚ್ 2011 (13:39 IST)
ತಮ್ಮ ಗಂಡಂದಿರ ಜತೆಗಿನ ಭಿನ್ನಾಭಿಪ್ರಾಯಗಳನ್ನು ಭಾರತೀಯ ಮಹಿಳೆಯರು ಸಾಮಾನ್ಯವಾಗಿ ಬಹಿರಂಗವಾಗಿ ಮಾತನಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಬಾಂಬೆ ಹೈಕೋರ್ಟ್, ಇದರಿಂದಾಗಿ ಪ್ರಮುಖ ಪ್ರಕರಣಗಳ ಸಂದರ್ಭದಲ್ಲಿ ಆರೋಪಗಳನ್ನು ಸಾಬೀತುಪಡಿಸಲು ಕಷ್ಟವಾಗುತ್ತಿದೆ ಎಂದು ಹೇಳಿದೆ.

ಐದು ವರ್ಷಗಳ ಹಿಂದೆ ತನ್ನ ಪತ್ನಿ ಗೀತಾಳನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ ಚೆಂಬೂರು ನಿವಾಸಿ ಮೋಹನ್ ರಂಗನಾಥನ್‌ಗೆ ನೀಡಲಾಗಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಮೇಲಿನಂತೆ ಅಭಿಪ್ರಾಯಪಟ್ಟಿದೆ.

ಮೋಹನ್ ಮತ್ತು ಆತನ ಪತ್ನಿ ಗೀತಾ ನಡುವೆ ಸೌಹಾರ್ದಯುತ ಸಂಬಂಧದ ಕೊರತೆಯಿತ್ತು ಎನ್ನುವುದು ಸಂಭವನೀಯತೆಯ ಪ್ರಚೋದನೆಯನ್ನು ರುಜುವಾತುಪಡಿಸಿದೆ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ ವಿಲ್ಕರ್ ಮತ್ತು ಪಿ.ಡಿ. ಖೋಡೆ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ತಮ್ಮ ಗಂಡಂದಿರ ಜತೆಗಿನ ಜಗಳ ಅಥವಾ ಇನ್ಯಾವುದೇ ಭಿನ್ನಾಭಿಪ್ರಾಯಗಳನ್ನು ನಮ್ಮ ದೇಶದ ಹೆಂಗಸರು ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ ಎನ್ನುವುದು ಪ್ರಚಲಿತ. ಇದರಿಂದಾಗಿ ದಂಪತಿಯ ನಡುವಿನ ಭಿನ್ನಾಭಿಪ್ರಾಯದ ಬಗೆಗಿನ ನಿಖರತೆ ಮತ್ತು ತೀವ್ರತೆಯ ಬಗ್ಗೆ ಸಮರ್ಪಕ ಪುರಾವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಅನಿಸಿಕೆ ವ್ಯಕ್ತಪಡಿಸಿದರು.

ವರ್ಷಕ್ಕೊಮ್ಮೆ ಚೆನ್ನೈಯಲ್ಲಿನ ತನ್ನ ಹೆತ್ತವರ ಮನೆಗೆ ಬರುತ್ತಿದ್ದ ಗೀತಾ, ಆ ಸಂದರ್ಭದಲ್ಲಿ ತನ್ನ ಗಂಡನ ಪೀಡನೆಯ ಬಗ್ಗೆ ಹೆತ್ತವರಲ್ಲಿ ದೂರಿದ್ದಳು. ಬಲಿಪಶುವಿನ ಕುಟುಂಬಿಕರು ಈ ಬಗ್ಗೆ ನೀಡಿರುವ ಹೇಳಿಕೆಗಳನ್ನೇ ನ್ಯಾಯಾಲಯ ಈಗ ಅವಲಂಭಿಸಿದೆ.

ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದುದು ಮೋಹನ್-ಗೀತಾ ದಂಪತಿಯ 18ರ ಹರೆಯ ಪುತ್ರಿ ರೀಮಾ. ಆದರೆ ಆಕೆ ವಿಚಾರಣೆ ಸಂದರ್ಭದಲ್ಲಿ ತಿರುಗಿ ಬಿದ್ದಿದ್ದಳು. ತನ್ನ ತಂದೆ ಮದ್ಯ ಸೇವಿಸುತ್ತಿದ್ದುದು ಹೌದು ಎಂದು ಒಪ್ಪಿಕೊಂಡಿದ್ದಳಾದರೂ, ಅಪ್ಪ-ಅಮ್ಮನ ನಡುವೆ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಎನ್ನುವುದನ್ನು ನಿರಾಕರಿಸಿದ್ದಳು.

ರೀಮಾ ಹೇಳಿಕೆಯನ್ನು ನ್ಯಾಯಮೂರ್ತಿಗಳು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಂಡರು. ಈಗಾಗಲೇ ತಾಯಿಯನ್ನು ಕಳೆದುಕೊಂಡಿರುವ ಮತ್ತು ತಂದೆಯ ವಿಚಾರಣೆ ನಡೆಯುತ್ತಿರುವ ದಂಪತಿಯ ಮಗು ಆಕೆ. ತಮ್ಮ ಗಂಡಂದಿರ ಬಗ್ಗೆ ಬಹಿರಂಗವಾಗಿ ಪತ್ನಿಯರು ಹೇಗೆ ಮಾತನಾಡುವುದಿಲ್ಲವೋ, ತಮ್ಮ ತಂದೆಯ ವಿರುದ್ಧ ಮಕ್ಕಳು ಕೂಡ ಅದೇ ರೀತಿಯ ಭಾವನೆ ಹೊಂದಿರುತ್ತಾರೆ ಎಂದರು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಮೋಹನ್‌ಗೆ ಆಧೀನ ನ್ಯಾಯಾಲಯವು ನೀಡಿರುವ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

ವೆಬ್ದುನಿಯಾವನ್ನು ಓದಿ