ಬೆಂಗಳೂರು: ರಾಜ್ಯದಲ್ಲಿ ಈಗ ಮಳೆ ಅಬ್ಬರಿಸುತ್ತಿದ್ದು ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಎಡೆಬಿಡದೇ ಸುರಿಯುತ್ತಿದೆ. ಹವಾಮಾನ ವರದಿಗಳ ಪ್ರಕಾರ ಕರಾವಳಿ ಜಿಲ್ಲೆಗಳಿಗೆ ಈ ದಿನದವರೆಗೂ ಭಾರೀ ಮಳೆಯ ಸೂಚನೆಯಿದೆ.
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಈ ಬಾರಿ ಉತ್ತಮ ಮಳೆಯಾಗುತ್ತಿದೆ. ಕಳೆದ ಎರಡು ವಾರಗಳಿಂದಲೂ ನಿರಂತರ ಮಳೆಯಾಗುತ್ತಿದೆ. ಅದರಲ್ಲೂ ಕಳೆದ ಮೂರು ದಿನಗಳಿಂದ ಎಡೆಬಿಡದೇ ಸುರಿಯುತ್ತಿದೆ.
ಕರಾವಳಿ ಜಿಲ್ಲೆಗಳಲ್ಲಿ ಜುಲೈ 21 ರವರೆಗೂ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ತಿಳಿದುಬಂದಿದೆ. ಅದಾದ ಬಳಿಕ ಅಬ್ಬರ ಕೊಂಚ ಕಡಿಮೆಯಾಗಬಹುದು ಎಂದು ಲೇಟೆಸ್ಟ್ ಹವಾಮಾನ ವರದಿಗಳು ಹೇಳುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣ ಮತ್ತು ಸಾಧಾರಣ ಮಳೆಯಾಗುತ್ತಲೇ ಇದೆ.
ಉಳಿದಂತೆ ಚಿಕ್ಕಮಗಳೂರು, ಕೊಡಗು, ಹಾಸನ, ತುಮಕೂರು, ಮೈಸೂರು, ಮಂಡ್ಯ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ, ಬೀದರ್, ಗದಗ, ದಾವಣಗೆರೆ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಇಂದೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.