ಗೋದ್ರಾ ಹತ್ಯಾಕಾಂಡ: 11 ಮಂದಿಗೆ ಗಲ್ಲು, 20 ಜನರಿಗೆ ಜೀವಾವಧಿ
ಮಂಗಳವಾರ, 1 ಮಾರ್ಚ್ 2011 (12:20 IST)
PTI
59 ಹಿಂದೂ ಕರಸೇವಕರು ಬಲಿಯಾದ ಗೋದ್ರಾ ಹತ್ಯಾಕಾಂಡದ 31 ಆರೋಪಿಗಳಲ್ಲಿ 11 ಮಂದಿಗೆ ಮರಣದಂಡನೆ, 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಅಹಮದಾಬಾದ್ ವಿಶೇಷ ನ್ಯಾಯಾಲಯ ಮಂಗಳವಾರ ಪ್ರಕಟಿಸಿದೆ.
ಸಾಬರ್ಮತಿ ಸೆಂಟ್ರಲ್ ಜೈಲನ್ ಒಳಗಡೆ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶ ಪಿ.ಆರ್.ಪಟೇಲ್ ಅವರನ್ನೊಳಗೊಂಡ ಪೀಠ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.
ವಿಶೇಷ ನ್ಯಾಯಾಲಯ ಕಳೆದ ವಾರವಷ್ಟೇ ಪ್ರಕರಣದ 94 ಆರೋಪಿಗಳಲ್ಲಿ 31 ಮಂದಿ ತಪ್ಪಿತಸ್ಥರು ಎಂದು ಪ್ರಕಟಿಸಿ, 63 ಮಂದಿಯನ್ನು ಖುಲಾಸೆಗೊಳಿಸಿ ಆರೋಪಿಗಳ ಶಿಕ್ಷೆಯ ಪ್ರಮಾಣವನ್ನು ಫೆಬ್ರುವರಿ 25ಕ್ಕೆ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಆದರೆ ಫೆಬ್ರುವರಿ 25ರಂದು ಶಿಕ್ಷೆಯನ್ನು ಮಾರ್ಚ್ 1ಕ್ಕೆ ನೀಡುವುದಾಗಿ ಹೇಳಿತ್ತು. ಅಲ್ಲದೇ ಪ್ರಕರಣದ ಪ್ರಮುಖ ಆರೋಪಿ ಎಂದು ಶಂಕಿಸಿದ್ದ ಮೌಲ್ವಿ ಉಮರ್ಜೀಯನ್ನೂ ಕೂಡ ಕೋರ್ಟ್ ದೋಷಮುಕ್ತಗೊಳಿಸಿತ್ತು.
ಗುಜರಾತ್ ಕೋಮುಗಲಭೆಗೆ ಮೂಲ ಕಾರಣವಾದ ಗೋದ್ರಾ ಹಿಂದೂಗಳ ಹತ್ಯಾಕಾಂಡವು ವ್ಯವಸ್ಥಿತ ಪಿತೂರಿಯೇ ವಿನಃ ಆಕಸ್ಮಿಕ ಘಟನೆ ಅಲ್ಲ ಎಂದು ನ್ಯಾಯಮೂರ್ತಿ ಪಿ.ಆರ್.ಪಟೇಲ್ ತೀರ್ಪು ನೀಡಿದ್ದರು.
ಅಯೋಧ್ಯೆಗೆ ತೆರಳಿದ್ದ ಹಿಂದೂ ಕರಸೇವಕರು ಸಾಬರಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ಬಿಹಾರದ ದರ್ಬಾಂಗಾದಿಂದ ಗುಜರಾತಿನ ಅಹಮದಾಬಾದ್ಗೆ ಬರುತ್ತಿದ್ದಾಗ, ಗೋದ್ರಾ ರೈಲು ನಿಲ್ದಾಣದಲ್ಲಿ 27-02-2002ರಂದು ಬೆಳಿಗ್ಗೆ ಎಸ್6 ಬೋಗಿಗೆ ಹೊರಗಿನಿಂದ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ 59 ಕರಸೇವಕರು ಸಜೀವ ದಹನಗೊಂಡಿದ್ದರು.