ಲೂಟಿಯ ನಂತರ ಕಾಂಗ್ರೆಸ್-ಡಿಎಂಕೆ ನಾಟಕ: ಜಯಲಲಿತಾ

ಗುರುವಾರ, 10 ಮಾರ್ಚ್ 2011 (13:42 IST)
2ಜಿ ತರಂಗಾಂತರ ಹಗರಣದಲ್ಲಿ ಸಾಕಷ್ಟು ಕೊಳ್ಳೆ ಹೊಡೆದ ನಂತರ ಕಾಂಗ್ರೆಸ್ ಮತ್ತು ಡಿಎಂಕೆ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿಕೊಂಡಿವೆ. ಕೊನೆಗೂ ಬೆಕ್ಕನ್ನು ಚೀಲದಿಂದ ಹೊರಗೆ ತೆಗೆಯಲಾಗಿದೆ. ಇದೊಂದು ದೊಡ್ಡ ಹಾಸ್ಯಮಯ ನಾಟಕ ಎಂದು ಎಐಎಡಿಎಂಕೆ ವರಿಷ್ಠೆ ಜೆ. ಜಯಲಲಿತಾ ಲೇವಡಿ ಮಾಡಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿನ ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಇದು ಅಂತ್ಯಗೊಂಡಿತ್ತು. ಜಯಲಲಿತಾ ಪ್ರಕಾರ, ಡಿಎಂಕೆಗೆ ಇದು ಹೊಸತಲ್ಲ. ತನಗೆ ಅಪಾಯ ಎಂಬ ಸಂದರ್ಭ ಕಂಡು ಬಂದಾಗ ಆ ಪಕ್ಷ ಇದೇ ರೀತಿ ಮಾಡಿಕೊಂಡು ಬಂದಿದೆ.

ಒಂದು ನಗೆ ನಾಟಕವನ್ನು ಪ್ರದರ್ಶನ ಮಾಡಲಾಗಿದೆ. ಚೀಲದಿಂದ ಕೊನೆಗೂ ಬೆಕ್ಕನ್ನು ಹೊರಗೆ ತೆಗೆಯಲಾಗಿದೆ. ಸತ್ಯ ಎಲ್ಲರಿಗೂ ಕಾಣುವಂತಿದೆ. ಜತೆಯಾಗಿ ತರಂಗಾಂತರ ಲೂಟಿ ಮಾಡಿದ್ದ ಡಿಎಂಕೆ ಮತ್ತು ಕಾಂಗ್ರೆಸ್‌ಗಳು ತಮ್ಮ ನಡುವಿನ ಭಿನ್ನಮತವನ್ನು ಸರಿಪಡಿಸಿಕೊಂಡಿವೆ ಎಂದು ಜಯಲಲಿತಾ ಟೀಕಿಸಿದ್ದಾರೆ.

'ಕಳೆದ ಕೆಲವು ದಿನಗಳ ಕಾಲ ನಡೆದ ಘಟನೆಗಳು ಮಾಧ್ಯಮ ಮತ್ತು ಡಿಎಂಕೆ-ಕಾಂಗ್ರೆಸ್ ಕಾರ್ಯಕರ್ತರಿಗೆ ಅಚ್ಚರಿ ತಂದಿತ್ತು. ಕಾಂಗ್ರೆಸ್ ಮುಂದಿಟ್ಟಿದ್ದ ಸೀಟುಗಳ ಬೇಡಿಕೆಗೆ ಡಿಎಂಕೆ ವರಿಷ್ಠ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಯುಪಿಎ ಸರಕಾರದಿಂದ ಹೊರಗೆ ಬರುವುದಾಗಿಯೂ ಅವರು ಬೆದರಿಕೆ ಹಾಕಿದರು'

'ಡಿಎಂಕೆಯ ಕೇಂದ್ರ ಸಚಿವರು ತಮ್ಮ ರಾಜೀನಾಮೆ ಪತ್ರಗಳೊಂದಿಗೆ ದೆಹಲಿಯಿಂದ ವಿಮಾನವನ್ನೇರಿ ಚೆನ್ನೈಗೆ ಬಂದರು. ಆದರೆ ಅವರ ರಾಜೀನಾಮೆ ಪತ್ರಗಳು ಕಿಸೆಯಿಂದ ಹೊರಗೆ ಬರಲೇ ಇಲ್ಲ. ಬದಲಿಗೆ ಮರುಮೈತ್ರಿ ನಡೆದು ಹೋಯಿತು. ಈ ಎಲ್ಲಾ ನಾಟಕಗಳ ನಡುವೆ ತರಂಗಾಂತರ ತನಿಖೆಗಳು, ಬೆಲೆಯೇರಿಕೆ ಮುಂತಾದ ಸಮಸ್ಯೆಗಳ ಬಗ್ಗೆ ಎಲ್ಲರೂ ಮೈಮರೆಯುವಂತಹ ಪರಿಸ್ಥಿತಿ ಸೃಷ್ಟಿಯಾಯಿತು. ಇದು ಕರುಣಾನಿಧಿಯ ಪುರಾತನ ತಂತ್ರ'

'ಇದೇನೂ ಹೊಸತಲ್ಲ, ನನಗೆ ಅಚ್ಚರಿಯೂ ತಂದಿಲ್ಲ. 2009ರಲ್ಲಿ ಕೇಂದ್ರದಲ್ಲಿ ಸಂಪುಟ ರಚನೆ ಸಂದರ್ಭದಲ್ಲೂ ಇದೇ ರೀತಿ ನಡೆದಿತ್ತು. ಪ್ರಧಾನ ಮಂತ್ರಿಯವರ ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿಯಲಾಗಿತ್ತು. ಹಾಗೂ ಹೀಗೂ ಮಾಡಿ ತನ್ನ ಪುತ್ರ ಅಳಗಿರಿ, ಅಳಿಯ ದಯಾನಿಧಿ ಮಾರನ್ ಮತ್ತು ತನ್ನ ನೆಚ್ಚಿನ ಮಗಳ ಆಪ್ತ ಸಹಾಯಕ ಎ. ರಾಜಾಗೆ ಸಚಿವ ಸ್ಥಾನ ಸಿಗುವಂತೆ ಕರುಣಾನಿಧಿ ಮಾಡಿದರು'

'ಶ್ರೀಲಂಕಾದಲ್ಲಿ ಅಮಾಯಕ ತಮಿಳರ ಮಾರಣಹೋಮ ನಡೆದಾಗ, ತಮಿಳುನಾಡಿಗೆ ತನ್ನ ಪಾಲಿನ ಕಾವೇರಿ ನೀರನ್ನು ಕರ್ನಾಟಕವು ಹರಿಸಲು ನಿರಾಕರಿಸಿದಾಗ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮುಲ್ಲೈ ಪೆರಿಯಾರ್ ಕುರಿತು ಕೇರಳ ನಡೆದುಕೊಳ್ಳದೇ ಇದ್ದಾಗ, ಪೆಟ್ರೋಲಿಯಂ ದರಗಳನ್ನು ಕೇಂದ್ರ ಆಗಾಗ ಹೆಚ್ಚಳ ಮಾಡಿದಾಗ, ಅಗತ್ಯ ವಸ್ತುಗಳ ಬೆಲೆಯೇರಿಕೆ ಆದಾಗ, ಸಮುದ್ರದಲ್ಲಿ ಭಾರತೀಯ ಮೀನುಗಾರರ ಹತ್ಯೆ ನಡೆದಾಗ, ರೈತರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಾಗ -- ಇಂತಹ ಸಂದರ್ಭದಲ್ಲಿ ಕರುಣಾನಿಧಿಯವರು ತಾನು ಸರಕಾರದಿಂದ ಹೊರಗೆ ಬರುವುದಾಗಿ ಬೆದರಿಕೆ ಹಾಕುವುದಿಲ್ಲ'

'ಬದಲಿಗೆ ತನ್ನ ಮಕ್ಕಳು, ಸಂಬಂಧಿಕರು ಮತ್ತು ಆಪ್ತರಿಗೆ ನಿರ್ದಿಷ್ಟ ಸಚಿವ ಸ್ಥಾನ ಸಿಗದೇ ಇದ್ದಾಗ, ಆಪ್ತರನ್ನು ಸಿಬಿಐ ವಿಚಾರಣೆ ನಡೆಸಲು ಮುಂದಾದಾಗ, ತನಗೆ ಲಾಭವಾಗುವುದಿಲ್ಲ ಎಂದಾಗ ಮಾತ್ರ ಬೆದರಿಕೆಗಳು ಕಾಣಿಸುತ್ತವೆ' ಎಂದು ಮಾಜಿ ಮುಖ್ಯಮಂತ್ರಿ ಜಯಲಲಿತಾ ತನ್ನ ಹೇಳಿಕೆಯಲ್ಲಿ ಡಿಎಂಕೆ-ಕಾಂಗ್ರೆಸ್ ಸೀಟು ಹಂಚಿಕೆ ಕುರಿತ ವಿವಾದವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ