ಸೋನಿಯಾ ಗಾಂಧಿ ಕಚೇರಿಯಲ್ಲೇ ಕಾಂಗ್ರೆಸ್ ಟಿಕೆಟ್ ಸೇಲ್

ಗುರುವಾರ, 31 ಮಾರ್ಚ್ 2011 (10:45 IST)
ಕೇರಳ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಎಂಬ ಹೊತ್ತಿನಲ್ಲಿ ಕೇಳಿ ಬಂದಿರುವ ಆರೋಪವಿದು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕಚೇರಿಯಲ್ಲೇ ಪಕ್ಷದ ಟಿಕೆಟುಗಳು ಮಾರಾಟವಾಗುತ್ತಿವೆ. ಅಂತಹ ಜಾಲವೊಂದು ಅಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇರಳ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಆರೋಪಿಸಿದ್ದಾರೆ.

ಮಾಜಿ ಆರೋಗ್ಯ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಕೆ. ರಾಮಚಂದ್ರನ್ ಈಗ ಬಾಂಬ್ ಹಾಕಿದ್ದಾರೆ. ಪಕ್ಷದಲ್ಲಿ ಮೂಲೆಗುಂಪಾದ ನಂತರ ಇಂತಹ ಆರೋಪ ಅವರಿಂದ ಬಂದಿದೆ.

ಏಪ್ರಿಲ್ 13ರಂದು ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಗಾಗಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಸರಿಯಾಗಿಲ್ಲ. ಅರ್ಹರಿಗೆ ಟಿಕೆಟುಗಳನ್ನು ನೀಡಲಾಗಿಲ್ಲ. ಬದಲಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಮೇಶ್ ಚೆನ್ನಿತ್ತಾಲ ಮತ್ತು ಪ್ರತಿಪಕ್ಷ ನಾಯಕ ಒಮನ್ ಚಾಂಡಿ ಅವರ ನಡುವೆ ಹಂಚಲಾಗಿದೆ. ಇವರಿಬ್ಬರ ನಾಯಕತ್ವದಲ್ಲೇ ಕಾಂಗ್ರೆಸ್ ಹೋಗುವುದಾದರೆ ಐದು ವರ್ಷಗಳ ಒಳಗೆ ಪಕ್ಷ ಪಾತಾಳಕ್ಕೆ ಕುಸಿಯಲಿದೆ ಎಂದು ರಾಮಚಂದ್ರನ್ ಆರೋಪಿಸಿದ್ದಾರೆ.

ತಿರುವನಂತಪುರಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸೋನಿಯಾ ಗಾಂಧಿ ಕಚೇರಿಯ ಪಟಾಲಂನಲ್ಲಿರುವ ಚಾಂಡಿ ಮತ್ತು ಚೆನ್ನಿತ್ತಾಲ ಅವರ ಗುಂಪಿಗೆ ಟಿಕೆಟುಗಳನ್ನು ಮಾರಾಟ ಮಾಡಲಾಗಿದೆ. ಚುನಾವಣೆಯ ಟಿಕೆಟುಗಳನ್ನು ಮಾರಾಟ ಮಾಡಿರುವ ಬಗ್ಗೆ ನನಗೆ ಖಚಿತತೆಯಿದೆ. ಈ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಲಿದ್ದೇನೆ. ಕಠಿಣ ಕ್ರಮದ ಬೆದರಿಕೆ ಪಕ್ಷದಿಂದ ಬಂದರೂ ನಾನು ಬಹಿರಂಗಪಡಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಈ ಹಿಂದಿನ ಕಾಂಗ್ರೆಸ್ ಸರಕಾರದ ಮೇಲೂ ರಾಮಚಂದ್ರನ್ ಆರೋಪಗಳ ಮೇಲೆ ಆರೋಪಗಳನ್ನು ಮಾಡಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಸಚಿವ ಸ್ಥಾನದಿಂದ ಕಿತ್ತು ಹಾಕಲಾಗಿತ್ತು ಎಂದು ಆಪಾದಿಸಿದ್ದಾರೆ.

ಸಾರ್ವಜನಿಕ ಕ್ಷೇತ್ರದ ಯೋಜನೆಯೊಂದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ನೀಡದೇ ಇದ್ದುದಕ್ಕೆ ನನಗೆ ಚಾಂಡಿ ಮತ್ತು ಚೆನ್ನಿತ್ತಾಲ ಬೆದರಿಕೆ ಹಾಕಿದ್ದರು. 256 ಕೋಟಿ ರೂಪಾಯಿಗಳ ಈ ಯೋಜನೆಗೆ ಒಪ್ಪಿಗೆ ನೀಡದೇ ಇದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಹೇಳಲಾಗಿತ್ತು. ನಂತರ ನನ್ನ ವಿರುದ್ಧ ಸುಳ್ಳು ಆಪಾದನೆಗಳನ್ನು ಹೊರಿಸಲಾಯಿತು ಎಂದು ಕಿಡಿ ಕಾರಿದರು.

ಸಚಿವರ ಕಚೇರಿಯಿಂದ ಜೀವ ಬೆದರಿಕೆ ಬಂದಿದೆ ಎಂದು ವಯನಾಡು ಜಿಲ್ಲಾ ವೈದ್ಯಾಧಿಕಾರಿಯವರು ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ರಾಮಚಂದ್ರನ್ ಅವರನ್ನು ಸಚಿವ ಸ್ಥಾನದಿಂದ 2006ರಲ್ಲಿ ಕೈ ಬಿಡಲಾಗಿತ್ತು.

ಕಾಂಗ್ರೆಸ್ ರಾಜ್ಯ ಘಟಕದ ವಿರುದ್ಧ ಕಿಡಿ ಕಾರಿರುವ ರಾಮಚಂದ್ರನ್, ಪಕ್ಷದಲ್ಲೀಗ ನಿಷ್ಠಾವಂತರಿಗೆ ಅವಕಾಶವಿಲ್ಲ. ಹಣವಿದ್ದವರಿಗೆ ಮಾತ್ರ ಟಿಕೆಟ್ ನೀಡಲಾಗುತ್ತಿದೆ. ಇದರ ವಿರುದ್ಧ ಕೆಪಿಸಿಸಿ ಕಚೇರಿಯ ಎದುರು ಧರಣಿ ನಡೆಸಲಿದ್ದೇನೆ ಎಂದೂ ಪ್ರಕಟಿಸಿದರು.

ಆರೋಪಗಳನ್ನು ಚಾಂಡಿ ಮತ್ತು ಚೆನ್ನಿತ್ತಾಲ ನಿರಾಕರಿಸಿದ್ದಾರೆ. ಟಿಕೆಟ್ ಪಡೆಯಲು ವಿಫಲರಾದರೆ ಮಾತ್ರ ಇಂತಹ ಆರೋಪಗಳು ಬರುತ್ತವೆ ಎಂದು ಅವರು ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ