ಊಟಕ್ಕಿಲ್ಲದ ಉಪ್ಪಿನಕಾಯಿಯು ಎಷ್ಟೇ ರುಚಿಯಾಗಿದ್ದರೂ ಸಪ್ಪೆ ಎಂಬ ಮಾತು ಚಾಲ್ತಿಯಲ್ಲಿದೆ. ಉಪ್ಪಿನಕಾಯಿ ಇಲ್ಲದಿದ್ದರೂ ಜನರು ಹಪ್ಪಳವನ್ನಾದರೂ ನೆಂಜಿಕೊಂಡು ತಿನ್ನುತ್ತಾರೆ. ಈ ಸಂಡಿಗೆಯೂ ಕೂಡಾ ಅದೇ ಸಾಲಿನಲ್ಲಿ ಬರುತ್ತದೆ. ಬೇಸಿಗೆಯಲ್ಲಿ ಗರಿಗರಿಯಾಗಿ ಸಂಡಿಗೆಯನ್ನು ಒಣಗಿಸಿ ಮಳೆಗಾಲದಲ್ಲಿ ತಿನ್ನುವ ಮಜವೇ ಬೇರೆ. ಹಾಗಾದರೆ ರವೆ ಸಂಡಿಗೆಯನ್ನೂ ಸಹ ಸುಲಭವಾಗಿ ಮಾಡಬಹುದು. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..
ತಯಾರಿಸುವ ವಿಧಾನ :
ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ 7 ರಿಂದ 8 ಕಪ್ ನೀರನ್ನು ಹಾಕಿ ಕುದಿಯಲು ಇಡಬೇಕು. ನಂತರ ಹಸಿಮೆಣಸು ಮತ್ತು ಜೀರಿಗೆಯ ಪೇಸ್ಟ್ ಅನ್ನು ಮಾಡಿಕೊಳ್ಳಬೇಕು. ನೀರು ಕುದಿಯಲು ಪ್ರಾರಂಭಿಸಿದಾಗ ರವೆ, ಉಪ್ಪು, ಇಂಗು ಹಾಕಿ ರವೆಯು ಗಂಟಾಗದಂತೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಕಲುಕುತ್ತಿರಬೇಕು. ಅದು ದಪ್ಪ ಗಂಜಿಯಷ್ಟು ಗಟ್ಟಿಯಾದ ಮೇಲೆ ಉರಿಯನ್ನು ಆರಿಸಬೇಕು. ನಂತರ ಒಂದು ಪ್ಲಾಸ್ಟಿಕ್ ಶೀಟ್ ತೆಗೆದುಕೊಂಡು ಅದರಲ್ಲಿ ಈ ರವೆಯ ಮಿಶ್ರಣವನ್ನು ತೆಗೆದುಕೊಂಡು ಚಿಕ್ಕ ಚಿಕ್ಕ ಸಂಡಿಗೆಯನ್ನು ಹಾಕುತ್ತಾ ಬರಬೇಕು. ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಎರಡು ದಿನ ಹೀಗೆಯೇ ಬಿಸಿಲಿನಲ್ಲಿ ಒಣಗಿಸಬೇಕು.
ಒಂದು ಅಥವಾ ಎರಡು ದಿನಕ್ಕೆ ಸಂಡಿಗೆಯು ಪೂರ್ತಿ ಒಣಗಿ ಪ್ಲಾಸ್ಟಿಕ್ ಬಿಡುತ್ತದೆ. ನಂತರ ಅದನ್ನು ಪ್ಲಾಸ್ಟಿಕ್‌ನಿಂದ ಬೇರ್ಪಡಿಸಿ ಒಂದು ಅಗಲವಾದ ತಟ್ಟೆಗೆ ಹಾಕಿ ಇನ್ನೊಂದು ದಿನ ಬಿಸಿಲಿನಲ್ಲಿಡಬೇಕು. ನಂತರ ಒಂದು ಗಾಳಿಯಾಡದ ಡಬ್ಬಿಯನ್ನು ತೆಗೆದುಕೊಂಡು ಶೇಖರಿಸಿಡಬೇಕು. ಇದನ್ನು ಬೇಕಾದಾಗ ಎಣ್ಣೆಯಲ್ಲಿ ಕರಿದು ಬಿಸಿ ಬಿಸಿಯಾದ ಅನ್ನ, ಸಾರು ಅಥವಾ ತೊವ್ವೆ ಜೊತೆ ಸವಿಯಬಹುದು. ಅದರಲ್ಲಿಯೂ ಜೋರಾದ ಮಳೆಯಲ್ಲಿ ಆ ಸಂಡಿಗೆಯನ್ನು ಕರಿದು ಸವಿಯುವ ಮಜವೇ ಬೇರೆ.