ಬಾಯಿಗೂ ರುಚಿ ಆರೋಗ್ಯಕ್ಕೂ ಉತ್ತಮ ರಾಗಿ ಬರ್ಫಿ

ಶುಕ್ರವಾರ, 9 ಜೂನ್ 2017 (16:19 IST)
ಸಿರಿಧಾನ್ಯಗಳಲ್ಲೊಂದಾದ ರಾಗಿ ಕ್ಯಾಲ್ಸಿಯಂ, ಖನಿಜಾಂಶಗಳು, ಪ್ರೊಟಿನ್ ಹೇರಳವಾಗಿರುವ ಪೋಷಕಾಂಶಗಳ ಆಗರ. ಇದರಲ್ಲಿ ನಾರಿನ ಅಂಶ, ಇತರ ಆಹಾರ ಧಾನ್ಯಗಳಿಗಿಂತ ಹೆಚ್ಚಾಗಿದೆ.
 
ದೇಹ ತೂಕ ಇಳಿಸುವವರಿಗೆ ವರದಾನವಾಗಿದೆ. ರಾಗಿಯನ್ನು ನಿತ್ಯವೂ ಸೇವಿಸಿದಲ್ಲಿ ದೇಹದಲ್ಲಿ ರಕ್ತ ವೃದ್ಧಿಯಾಗುತ್ತದೆ. ಮಧುಮೇಹಿಗಳಂತೂ ತಪ್ಪದೇ ಸೇವಿಸಬೇಕಾದ ಸಿರಿಧಾನ್ಯವಿದು. ಹಾಗಾದರೆ ಸವಿಯಲು ರುಚಿಕರವಾದ ಆರೋಗ್ಯಕ್ಕೆ ಉತ್ತಮವಾದ ಹಾಗೂ ಮಾಡಲು ಬಲು ಸುಲಭವಾದ ರಾಗಿ ಬರ್ಫಿ ಕುರಿತು ಮಾಹಿತಿ ಇಲ್ಲಿದೆ.
 
ಬೇಕಾಗುವ ಸಾಮಗ್ರಿಗಳು:
ನೆನೆಸಿ ಹಾಕಿದ ರಾಗಿ -1 ಬೌಲ್
 
ಬೆಲ್ಲ - ಮುಕ್ಕಾಲು ಬೌಲ್
 
ತೆಂಗಿನ ತುರಿ - ಸ್ವಲ್ಪ
 
ತುಪ್ಪ - 2-3 ಚಮಚ
 
ಏಲಕ್ಕಿ ಪುಡಿ -1/2 ಚಮಚ
 
ಗೋಡಂಬಿ-ಸ್ವಲ್ಪ
ಮಾಡುವ ವಿಧಾನ
 
ಒಂದು ದಿನ ಮುಂಚಿತವಾಗಿಯೇ ನೆನೆಸಿಟ್ಟ ರಾಗಿತನ್ನು ಚೆನ್ನಾಗಿ ತೊಳೆದು ಜಾಲಿಸಿ. ಬಳಿಕ ಅದನ್ನು ಮಿಕಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಹೀಗೆ ರುಬ್ಬಿಕೊಂಡ ಮಿಶ್ರಣವನ್ನು ಶೋಧಿಸಿಕೊಳ್ಳಿ.
 
ಈಗ ತೆಂಗಿನ ತುರಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
 
ಬಳಿಕ ಶೋಧಿಸಿಕೊಂಡಿರುವ ರಾಗಿ ಹಾಲನ್ನು ಒಂದು ಪ್ಯಾನ್ ಗೆ ಹಾಕಿ.  ಅದಕ್ಕೆ  ಬೆಲ್ಲವನ್ನು ಸೇರಿಸಿ ಕೈಯಾಡಿಸುತ್ತಾ ಇರಿ. 5 ನಿಮಿಷದ ಬಳಿಕ ಅದಕ್ಕೆ ರುಬ್ಬಿಕೊಂಡಿರುವ ತೆಂಗಿನ ಹಾಲನ್ನು ಸೇರಿಸಿ ಮತ್ತೆ ಕೈಯಾಡಿಸುತ್ತಾ ಇರಿ. ಸಣ್ಣ ಉರಿಯಲ್ಲಿ ಉಂದೆಯಾಗದಂತೆ ಮಿಶ್ರಣವನ್ನು ತಿರುಗಿಸಬೇಕು.  ಈಗ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ತಿರುಗುಸಿ.
 
ಸುಮಾರು 10 ನಿಮಿಷದ ಬಳಿಕ ನೀರಲ್ಲಿಅದ್ದಿದ ಬೆರಳಿನಿಂದ ಮಿಶ್ರಣವನ್ನು ಮುಟ್ಟಿನೋದಿ. ಅದು ಬೆರಳಿಗೆ ಅಂಟಿಕೊಳ್ಳುತ್ತಿಲ್ಲವೆಂದರೆ ಬೆಂದಿದೆ ಎಂದರ್ಥ.
 
ಈಗ ಒಂದು ಬಟ್ಟಲಲ್ಲಿ ತುಂಪವನ್ನು ಸವರಿ. ಹೀಗೆ ತುಪ್ಪ ಸವರಿದ ಬಟ್ಟಲಿಗೆ ಕಾಯಿಸಿದ ರಾಗಿ ಮಿಶ್ರಣವನ್ನು ಹಾಕಿ ಒಂದು ಲೆವಲ್ ಅನ್ನಾಗಿ ಮಾಡಿ. ಬಳಿಕ 5 ನಿಮಿಷ ಆರಲು ಬಿಡಿ.
 
5 ನಿಮಿಷದ ಬಳಿಕ ಒಂದು ಚಾಕುವಿನಿಂದ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಅದರ ಮೇಲೆ ಗೋಡಂಬಿಯಿಂದ ಅಲಂಕರಿಸಿ. ಇದನ್ನು ತುಪ್ಪದ ಜತೆ ಸವಿಯಲು ನೀಡಿ.
 

ವೆಬ್ದುನಿಯಾವನ್ನು ಓದಿ