ಕಲಬುರಗಿ : ಪೊಲೀಸರ ಮೇಲೆ ಹಲ್ಲೆ, ಕೊಲೆ ಪ್ರಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ ಆರೋಪ.
ವಾಹನ ಚಾಲಕ ನಾಗೇಶ ಅಲಿಯಾಸ್ ನಾಗರಾಜ ಪೂಜಾರಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 6 ವರ್ಷ ಜೈಲು ಶಿಕ್ಷೆ ಹಾಗೂ 7 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ನಗರದ ಶಿವಾಜಿ ನಗರ ನಿವಾಸಿ, ಖಾಸಗಿ ವಾಹನ ಚಾಲಕನಾಗಿದ್ದ ನಾಗೇಶ (25) ಶಿಕ್ಷೆಗೆ ಒಳಗಾಗಿದ್ದಾರೆ. 2018ರಲ್ಲಿ ಕಲಬುರಗಿ ತಾಲೂಕಿನ ಕೆರೆಭೋಸಗಾದ ಹೊಲದಲ್ಲಿನ ಹಾಳುಬಿದ್ದ ಮನೆಯಲ್ಲಿ ಅಡಗಿದ್ದ. ಈತನನ್ನು ಬಂಧಿಸಲು ಪೊಲೀಸರು ಹೋದಾಗ, ಅವರ ಮೇಲೆ ತಲ್ವಾರ್ನಿಂದ ಹಲ್ಲೆ ಮಾಡಲು ಮುಂದಾಗಿದ್ದ.
ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ನಿಲ್ಲದೆ ಇದ್ದಾಗ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದರು. ಈ ಕುರಿತು ತನಿಖಾಧಿಕಾರಿ ವರದಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶುಕ್ಲಾಕ್ಷ ಪಾಲನ್ ಅವರು ಅಪರಾಧಿಗೆ 6 ವರ್ಷ ಜೈಲು ಶಿಕ್ಷೆ ಹಾಗೂ 7 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ನರಸಿಂಹಲು ವಾದ ಮಂಡಿಸಿದ್ದರು.