ಸೆನ್ಸೆಕ್ಸ್: 241 ಅಂಶಗಳ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಗುರುವಾರ, 30 ಜೂನ್ 2016 (12:23 IST)
ಜಾಗತಿಕ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 241 ಪಾಯಿಂಟ್‌ಗಳ ಏರಿಕೆ ಕಂಡಿದೆ. ಇದರಿಂದಾಗಿ ಸತತ ನಾಲ್ಕನೇ ದಿನವೂ ಶೇರುಪೇಟೆ ಚೇತರಿಕೆ ಕಂಡಂತಾಗಿದೆ.
 
ಮುಂಬರುವ ಅಧಿವೇಶನದಲ್ಲಿ ಜಿಎಸ್‌ಟಿ ಮಸೂದೆಗೆ ಅಂಗೀಕಾರ ದೊರೆಯಲಿದೆ ಎನ್ನುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಶೇರುಪೇಟೆ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 
 
ಕಳೆದ ಮೂರು ದಿನಗಳ ವಹಿವಾಟಿನ ಮುಕ್ತಾಯಕ್ಕೆ 342.68 ಪಾಯಿಂಟ್‌ಗಳ ಚೇತರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 240.72 ಪಾಯಿಂಟ್‌ಗಳ ಏರಿಕೆ ಕಂಡು 26,981.11 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 64.60 ಪಾಯಿಂಟ್‌ಗಳ ಏರಿಕೆ ಕಂಡು 8,268.60 ಅಂಕಗಳಿಗೆ ತಲುಪಿದೆ.
 
ಉಕ್ಕು, ವಾಹನೋದ್ಯಮ, ರಿಯಲ್ಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.82 ರಷ್ಟು ಚೇತರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.1.73 ರಷ್ಟು ಏರಿಕೆಯಾಗಿದೆ. ಅಮೆರಿಕದ ಡೊ ಜೊನ್ಸ್ ಶೇರುಪೇಟೆ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.1.64 ರಷ್ಟು ಚೇತರಿಕೆ ಕಂಡಿದೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ