ಮಾರ್ಟಿನಾ ಹಿಂಗಿಸ್ ಜತೆಗಿನ ವಿರಸ ರಹಸ್ಯವೇನೂ ಅಲ್ಲ ಎಂದ ಸಾನಿಯಾ ಮಿರ್ಜಾ
ಬುಧವಾರ, 21 ಡಿಸೆಂಬರ್ 2016 (09:38 IST)
ಹೈದರಾಬಾದ್: ಮಾರ್ಟಿನಾ ಹಿಂಗಿಸ್ ಮತ್ತು ಸಾನಿಯಾ ಮಿರ್ಜಾ ಒಂದು ಕಾಲದ ಯಶಸ್ವಿ ಡಬಲ್ಸ್ ಜೋಡಿ. ಈ ಇಬ್ಬರೂ ಸೇರಿಕೊಂಡು ಅದೆಷ್ಟೋ ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ಆದರೆ ಕಳೆದ ಒಲಿಂಪಿಕ್ಸ್ ನಂತರ ಇಬ್ಬರೂ ಬೇರೆಯಾದರು. ಅದಕ್ಕೆ ಕಾರಣ ಏನೆಂದು ಸಾನಿಯಾ ಹೇಳಿಕೊಂಡಿದ್ದಾರೆ.
“ಒಲಿಂಪಿಕ್ಸ್ ಮೊದಲು ನಡೆದ ಮಾಂಟ್ರಿಯಲ್ ಕೂಟದಲ್ಲೇ ನಾವಿಬ್ಬರೂ ಬೇರಾಗಲು ತೀರ್ಮಾನಿಸಿದ್ದೆವು. ಯಾಕೋ ನಮ್ಮಿಬ್ಬರ ಜತೆಯಾಟದಲ್ಲಿ ಮೊದಲಿನ ಮಿಂಚು ಕಾಣುತ್ತಿಲ್ಲ ಎಂದು ಅನಿಸಲು ಪ್ರಾರಂಭಿಸಿತ್ತು. ಹೀಗಾಗಿ ರಹಸ್ಯವಾಗಿ ಕೋಣೆಯೊಂದರಲ್ಲಿ ಈ ಬಗ್ಗೆ ಮಾತಾಡಿಕೊಂಡೆವು. ಒಲಿಂಪಿಕ್ಸ್ ನಂತರ ಬೇರಾಗಬೇಕೆಂದು ತೀರ್ಮಾನಕ್ಕೆ ಬಂದೆವು.
ಆದರೆ ಅದು ಹೇಗೋ ಒಂದಿಬ್ಬರ ಮೂಲಕ ರಹಸ್ಯ ಬಯಲಾಯಿತು. ಒಲಿಂಪಿಕ್ಸ್ ಗೂ ಮೊದಲೇ ನಾವಿಬ್ಬರೂ ಬೇರೆಯಾಗುತ್ತಿದ್ದೇವೆ ಎನ್ನುವುದು ದೊಡ್ಡ ಸುದ್ದಿಯಾಯ್ತು” ಎಂದು ಸಾನಿಯಾ ಹೇಳಿಕೊಂಡಿದ್ದಾರೆ. ಇವರಿಬ್ಬರೂ ಸೇರಿಕೊಂಡು 11 ಡಬ್ಲ್ಯುಟಿಎ ಟೂರ್ನಿಗಳನ್ನು ಗೆದ್ದಿದ್ದರು.
ಇದೇ ವೇಳೆ ಲಿಯಾಂಡರ್ ಪೇಸ್ ಜತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ ಸಾನಿಯಾ “ನಾವು ಅವರ ಆಟವನ್ನು ನೋಡುತ್ತಾ ಬೆಳೆದಿದ್ದೇವೆ. ಟೆನಿಸ್ ಕಮ್ಯುನಿಟಿಯಲ್ಲಿ ಸಾಧಾರಣವಾಗಿ ಇರುವ ಭಿನ್ನಾಬಿಪ್ರಾಯಗಳು ನಮ್ಮೊಳಗಿದೆ. ಹಾಗೆ ನೋಡಿದರೆ ಮಹೇಶ್ ಭೂಪತಿ ಜತೆಗೂ ನನಗೆ ವೈಮನಸ್ಯವಿತ್ತು. ಆದರೆ ನಂತರ ನಾವು ಸ್ನೇಹಿತರಾಗಿದ್ದೆವು” ಎಂದು ಸಾನಿಯಾ ಸಮಜಾಯಿಷಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ