16 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿದು ಚಿನ್ನ ಗೆದ್ದ ಚೀನಾ ವೇಟ್‌ಲಿಫ್ಟರ್
ಸೋಮವಾರ, 8 ಆಗಸ್ಟ್ 2016 (18:05 IST)
ರಿಯೊ ಡಿ ಜನೈರೊ: ಚೀನಾದ ವೇಟ್‌ಲಿಫ್ಟರ್ ಲಾಂಗ್ ಕಿಂಗ್‌ಕುವಾನ್ ಭಾರ ಎತ್ತುವುದರಲ್ಲಿ 16 ವರ್ಷಗಳಷ್ಟು ಹಳೆಯದಾದ ವಿಶ್ವದಾಖಲೆಯನ್ನು ಮುರಿದು, 56 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಲಾಂಗ್ 307 ಕೆಜಿ ಒಟ್ಟು ಭಾರವನ್ನು ಎತ್ತಿ 2000 ಸಿಡ್ನಿ ಕ್ರೀಡಾಕೂಟದಲ್ಲಿ ಮಾಡಿದ್ದ ದಾಖಲೆಯನ್ನು ಮುರಿದಿದ್ದಾರೆ ಮತ್ತು ಉತ್ತರ ಕೊರಿಯಾ ವೇಟ್ ಲಿಫ್ಟರ್ ಓಮ್ ಯುನ್ ಚೋಲ್ ಅವರು ಹಗುರ ತೂಕದ ವಿಭಾಗದಲ್ಲಿ ಸಾಧಿಸಿದ್ದ ಪ್ರಾಬಲ್ಯವನ್ನು ಮುರಿದಿದ್ದಾರೆ.
2008ರಿಂದೀಚೆಗೆ ಈ ದಾಖಲೆಯನ್ನು ಮುರಿಯುವುದು ನನ್ನ ಕನಸಾಗಿತ್ತು. ಇದೊಂದು ಕಷ್ಟಕರ ಕೆಲಸವಾಗಿದ್ದು, ದಿನಗಳು ಮತ್ತು ವರ್ಷಗಳ ಕಾಲ ನಾನು ಈ ಕುರಿತು ಯೋಚಿಸಿದ್ದು, ಈಗ ಸಾಧಿಸಿದ್ದರಿಂದ ತುಂಬಾ ಸಂತೋಷವಾಗಿದೆ ಎಂದು ಲಾಂಗ್ ಉದ್ಗರಿಸಿದರು.
8 ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ 25 ವರ್ಷದ ಪಟು ಕ್ಲೀನ್ ಮತ್ತು ಜರ್ಕ್‌ನಲ್ಲಿನ ಕೊನೆಯ ಪ್ರಯತ್ನದಲ್ಲಿ 170 ಕೆಜಿ ಭಾರವನ್ನು ಎತ್ತಿ ಹೊಸ ಒಲಿಂಪಿಕ್ ದಾಖಲೆಯನ್ನು ಸ್ಥಾಪಿಸಿದ್ದಾರೆ ಮತ್ತು ಈ ವಿಭಾಗದ ಹಾಲಿ ಚಾಂಪಿಯನ್ ಓಮ್ ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ.
ಚೀನಾದ ಸ್ಟಾರ್ ಲಾಂಗ್ ಸ್ನಾಚ್‌ನಲ್ಲಿ 137 ಕೆಜಿ ಭಾರವನ್ನು ಎತ್ತಿದ್ದು ಓಮ್ ಜತೆ ಹಣಾಹಣಿ ಹೋರಾಟ ಮಾಡಿದ್ದರು.
ಅಭಿಮಾನಿಗಳ ಫೇವರಿಟ್ ಆಗಿದ್ದ ಓಮ್ ಸ್ನಾಚ್‌ನಲ್ಲಿ 134 ಕೆಜಿ ಮತ್ತು ಕ್ಲೀನ್ ಅಂಡ್ ಜರ್ಕ್‌ನಲ್ಲಿ 169 ಕೆಜಿ ತೂಕವನ್ನು ಎತ್ತಿ ಒಟ್ಟು 303 ಕೆಜಿಯಲ್ಲಿ ಮುಗಿಸಿದ್ದರು. ಕಂಚಿನ ಪದಕ ವಿಜೇತ ಥಾಯ್ಲೆಂಡ್ ಸಿನ್‌ಫೆಟ್‌ಗಿಂತ 14 ಕೆಜಿ ಮುಂದಿದ್ದರು.