ರಿಯೋ ಪ್ಯಾರಾಲಿಂಪಿಕ್ಸ್: ಹೈಜಂಪ್‌ನಲ್ಲಿ ಭಾರತಕ್ಕೆ ಚಿನ್ನ, ಕಂಚಿನ ಮೆರಗು

ಶನಿವಾರ, 10 ಸೆಪ್ಟಂಬರ್ 2016 (11:33 IST)
ರಿಯೋನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ ತೋರಿದ್ದು ಚಿನ್ನ ಮತ್ತು ಕಂಚಿನ ಮೂಲಕ ಖಾತೆ ತೆರೆದಿದೆ. ಪುರುಷರ ಹೈ ಜಂಪ್‌ ಟಿ-42 ವಿಭಾಗದಲ್ಲಿ ತಂಗವೇಲು ಚಿನ್ನಕ್ಕೆ ಮುತ್ತಿಕ್ಕಿದರೆ, ಇದೇ ಸ್ಪರ್ಧೆಯಲ್ಲಿ ಮತ್ತೊಬ್ಬ ಭಾರತೀಯ ವರುಣ್ ಭಾಟಿ ಕೂಡ ಕಂಚನ್ನು ಮುಡಿಗೇರಿಸಿಕೊಂಡಿದ್ದಾರೆ.  
ಮರಿಯಪ್ಪನ್ ತಂಗವೇಲು 1.89 ಮೀಟರ್ ದೂರ ಜಿಗಿದು ಚಿನ್ನ ಗೆದ್ದರು. ಇದು ಅವರ ವೈಯಕ್ತಿಕ ಶ್ರೇಷ್ಠ ದಾಖಲೆ ಕೂಡ. ಈ ಸಾಧನೆ ಮೂಲಕ 20 ವರ್ಷದ ತಂಗವೇಲು ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನ ತಂದುಕೊಟ್ಟ ಮೊದಲ ಭಾರತೀಯ ಎನ್ನಿಸಿಕೊಂಡರು. ಭಾಟಿ 1.86 ಮೀಟರ್ ದೂರಕ್ಕೆ ಜಿಗಿದು ಕಂಚನ್ನು ಪಡೆದುಕೊಂಡರು. ರಜತ ಪದಕ ಅಮೇರಿಕಾದ ಸ್ಯಾಮ್ ಗ್ರಿವ್ ಪಾಲಾಯಿತು.
 
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ದೇಶಕ್ಕೆ ಚಿನ್ನ ತಂದುಕೊಟ್ಟ ಮೂರನೆಯ ಆಟಗಾರ ಎಂಬ ಹೆಗ್ಗಳಿಕೆಗೂ ತಂಗವೇಲು ಪಾತ್ರರಾಗಿದ್ದಾರೆ,  ಈ ಹಿಂದೆ ಮುರಳಿಕಾಂತ್ ಪೆಟ್ಕರ್ (ಹೈಡೆಲ್ಬರ್ಗ್-1972) ಈಜಿನಲ್ಲಿ ಮತ್ತು ದೇವೇಂದ್ರ ಝಾಜ್‌ಹರಿಯಾ (ಜಾವೆಲಿನ್, 2004 ಅಥೆನ್ಸ್) ಚಿನ್ನ ಗೆದ್ದಿದ್ದರು. 
 
ತಂಗವೇಲು ಮತ್ತು ಭಾಟಿ ಸಾಧನೆಯೊಂದಿಗೆ ಭಾರತದ ಪ್ಯಾರಾಲಿಂಪಿಕ್ಸ್‌ನಲ್ಲಿ ಪಡೆದಿರುವ ಪದಕಗಳ ಮೊತ್ತ 10 ಆದಂತಾಯಿತು. ಅದರಲ್ಲಿ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ