17ನೇ ವಯಸ್ಸಿನಲ್ಲಿಯೇ ಲೈಂಗಿಕ ಕಿರುಕುಳ ಅನುಭವಿಸಿದ್ದೆ: ಮೇರಿ ಕೋಮ್

ಗುರುವಾರ, 6 ಅಕ್ಟೋಬರ್ 2016 (15:02 IST)
ಕೆಲ ವರ್ಷಗಳ ಹಿಂದೆ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರೂ ಯಾರ ಮುಂದೇ ಹೇಳದೆ ಮರ್ಯಾದೆಗೆ ಹೆದರಿ ಮೌನವಾಗಿರುತ್ತಿದ್ದರು. ಇದೀಗ ಆ ಕಾಲ ಮರೆಯಾಗಿದೆ. ಯುವತಿಯರು ತಮ್ಮ ಮೇಲೆ ನಡೆದಿರುವ ಲೈಂಗಿಕ ಕಿರುಕುಳಗಳನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ.
 
ಭಾರತದ ಹೆಮ್ಮೆಯ ಪುತ್ರಿ, ಐದು ಬಾರಿ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ಮೇರಿ ಕೋಮ್ ಕೂಡಾ ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳದ ಘಟನೆಯನ್ನು ಬಹಿರಂಗಪಡಿಸಿದ್ದಾರೆ. 
 
ಲೆಟ್ಸ್ ಟಾಕ್ ಅಬೌಟ್ ರೇಪ್ ಎನ್ನುವ ಸಾಮಾಜಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಮ್, ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಮಕ್ಕಳಿಗೆ ಬಹಿರಂಗಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. 
 
ಬೆಳಿಗ್ಗೆ 8.30 ರ ಸುಮಾರಿಗೆ ಬಾಕ್ಸಿಂಗ್ ತರಬೇತಿ ಮುಗಿಸಿಕೊಂಡು ರಿಕ್ಷಾದಲ್ಲಿ ಮನೆಗೆ ಮರಳುತ್ತಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ಸ್ಥನಗಳನ್ನು ಗಟ್ಟಿಯಾಗಿ ಹಿಡಿದು ಓಡಿ ಹೋದ. ನಾನು ಅವನನ್ನು ಬೆನ್ನಟ್ಟಿದೆ. ಆದರೆ ಅವನು ಪರಾರಿಯಾಗುವಲ್ಲಿ ಯಶಸ್ವಿಯಾದ. ನನ್ನ ಕೈಗೆ ಅವನು ಸಿಗಲಿಲ್ಲ ಎನ್ನುವ ಕೊರಗಿತ್ತು. ಇಲ್ಲವಾದಲ್ಲಿ ಅವನಿಗೆ ತಕ್ಕ ಪಾಠ ಕಲಿಸುತ್ತಿದ್ದೆ ಎಂದು ತಿಳಿಸಿದ್ದಾರೆ. 
 
2003ರ ಏಷ್ಯಾ ಗೇಮ್ಸ್ ಚಿನ್ನದ ಪಕ ವಿಜೇತೆಯಾದ ಮೇರಿ ಕೋಮ್, ತಮ್ಮ 9 ವರ್ಷದ ಮತ್ತು  3 ವರ್ಷದ ಪುತ್ರರಿಗೆ ಪತ್ರ ಬರೆದು, ಯುವತಿಯರಿಗೆ ಯಾರೇ ಕಿರುಕುಳ ನೀಡುತ್ತಿದ್ದರೂ ಯುವತಿ ಪರವಾಗಿ ನಿಂತು ಹೋರಾಟ ಮಾಡಿ ಎಂದು ಕರೆ ನೀಡಿದ್ದಾರೆ.
 
ನೀವು ಮುಂದೆ ಬೆಳೆದು ದೊಡ್ಡವರಾದಾಗ ಲೈಂಗಿಕ ಕಿರುಕುಳ ಮತ್ತು ರೇಪ್ ಅಪರಾಧಗಳಿಗೆ ಕಠಿಣೆ ಶಿಕ್ಷೆಯಾಗುತ್ತದೆ ನಿಮ್ಮ ಗಮನಕ್ಕೆ ಬರಬೇಕು. ವಿಷಾದದ ಸಂಗತಿಯೆಂದರೆ, ನವದೆಹಲಿಯಲ್ಲಿ ಒಬ್ಬ ವ್ಯಕ್ತಿ ಯುವತಿಗೆ ಸಾರ್ವಜನಿಕ ಪ್ರದೇಶದಲ್ಲಿ 37 ಬಾರಿ ಚಾಕುವಿನಿಂದ ತಿವಿಯುತ್ತಿದ್ದರೂ ಯಾರು ನೆರವಿಗೆ ಬರಲಿಲ್ಲ ಎನ್ನುವುದು. ಇಂತಹ ನೂರಾರು ಘಟನೆಗಳು ನಡೆಯುತ್ತಿವೆ. ಸಮಾಜ ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಮನವಿ ಮಾಡಿದರು.   
 
ಮೇರಿ ಕೋಮ್ ತಮ್ಮ ಪತಿಯೊಂದಿಗೆ ಐದು ವರ್ಷಗಳ ಡೇಟಿಂಗ್ ನಂತರ ಕಳೆದ 2005ರಲ್ಲಿ ವಿವಾಹವಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ