ಕನ್ನಡ ಬಿಟ್ಟು ತಮಿಳು ಧಾರಾವಾಹಿಗೆ ಹೋದ್ರು ಶ್ರುತಿ

PR
ಕಿರುತೆರೆ ಅಂದರೆ ಈಗ ಯಾರಿಗೂ ಹಿಂಜರಿಕೆಯಿಲ್ಲ. ಒಂದು ಕಾಲದಲ್ಲಿ ಬೆಳ್ಳಿತೆರೆಯಲ್ಲಿ ಮಿಂಚಿದವರೆಲ್ಲ ಈಗ ಕಿರುತೆರೆಯಲ್ಲೇ ಮಿಂಚುತ್ತಾ, ತಮ್ಮ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಅಳುಮುಂಜಿ ಶ್ರುತಿ ಉಳಿದವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕನ್ನಡ ಟಿವಿ ಬಿಟ್ಟು ತಮಿಳು ಧಾರಾವಾಹಿಗೆ ಮರುಳಾಗಿದ್ದಾರೆ.

ಶ್ರುತಿ ನಟಿಸುತ್ತಿರುವ ತಮಿಳು ಧಾರಾವಾಹಿಯ ಹೆಸರು 'ಕಾರ್ತಿಗೈ ಪೆಂಗಳ್'. ಜುಲೈ 30ರಿಂದ ಈ ಧಾರಾವಾಹಿ ಸನ್ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಹತ್ತು ಗಂಟೆಗೆ ಪ್ರಸಾರವಾಗುತ್ತಿದೆ.

ಶ್ರುತಿ ಕನ್ನಡ ಬಿಟ್ಟು ತಮಿಳು ಧಾರಾವಾಹಿಯಲ್ಲಿ ನಟಿಸಲು ಯಾಕೆ ಮುಂದಾದರು ಅನ್ನೋದು ಗೊತ್ತಾಗಿಲ್ಲ. ಆದರೆ ಆಕೆ ತಮಿಳರಿಗೆ ಹೊಸಬರಲ್ಲ. ಸುಮಾರು ಹದಿನೈದು ವರ್ಷಗಳ ಹಿಂದೆ 'ಕಲ್ಕಿ' ಎಂಬ ಚಿತ್ರದಲ್ಲಿ ಅವರು ತಮಿಳುನಾಡಿನಲ್ಲಿ ಭಾರೀ ಸುದ್ದಿ ಮಾಡಿದ್ದರು. ಅದಕ್ಕಾಗಿ ರಾಜ್ಯ ಪ್ರಶಸ್ತಿ ಮತ್ತು ಫಿಲಂ ಫೇರ್ ಪ್ರಶಸ್ತಿಗಳೂ ಶ್ರುತಿ ಪಾಲಾಗಿದ್ದವು. ಕೆ. ಬಾಲಚಂದರ್ ನಿರ್ದೇಶನದ ಆ ಚಿತ್ರದಲ್ಲಿ ಪ್ರಕಾಶ್ ರೈ ಕೂಡ ನಟಿಸಿದ್ದರು.

ಅದೇ ಜನಪ್ರಿಯತೆಯನ್ನು ಲಾಭ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೈ ಹಾಕಿರುವ ಪ್ರಾಜೆಕ್ಟ್‌ಗೆ ಶ್ರುತಿ ಸೈ ಎಂದಿದ್ದಾರೆ. ಆದರೆ ಧಾರಾವಾಹಿಯಲ್ಲಿ ಅವರ ಧ್ವನಿ ಇದ್ದಂತಿಲ್ಲ. ಶ್ರುತಿ ಪಾತ್ರಕ್ಕೆ ಬೇರೆ ಯಾರಿಂದಲೋ ಡಬ್ ಮಾಡಿಸಲಾಗಿದೆ.

ಸದ್ಯ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿರುವ 'ಕಲ್ಪನಾ' ಹಾಗೂ ಸಹೋದರ ಶರಣ್ 'ರ‍್ಯಾಂಬೋ' ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನೇ ಮಾಡಿ ತಮಿಳಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಕಿರುತೆರೆಗೆ ಬಂದು, ಹೆಂಗಳೆಯರ ಕರವಸ್ತ್ರ ಒದ್ದೆ ಮಾಡಿದರೂ ಅಚ್ಚರಿಯಿಲ್ಲ ಬಿಡಿ!

ವೆಬ್ದುನಿಯಾವನ್ನು ಓದಿ