ಟಿವಿ ಸೀರಿಯಲ್‌ಗೆ ಬಂದ್ರು ಭಾರತಿ ವಿಷ್ಣುವರ್ಧನ್

PR
ಕೆಲ ವರ್ಷಗಳ ಹಿಂದಾಗಿದ್ದರೆ, 'ಟೀವಿ ಸೀರಿಯಲ್ಲಾ?' ಅಂತ ಮೂಗು ಮುರಿಯುವವರಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅತಿರಥ ಮಹಾರಥರೇ ಕಿರುತೆರೆ ಮೊರೆ ಹೋಗಿದ್ದಾರೆ. ಆ ಸಾಲಿಗೆ ಈಗ ಡಾ. ಭಾರತಿ ವಿಷ್ಣುವರ್ಧನ್ ಮರು ಸೇರ್ಪಡೆಯಾಗಿದ್ದಾರೆ. ಅವರೀಗ ಸುವರ್ಣ ಮನರಂಜನೆ ವಾಹಿನಿಯಲ್ಲಿ 'ಭಾಗ್ಯವಂತರು'.

ಜುಲೈ 30ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುವ 'ಭಾಗ್ಯವಂತರು' ಧಾರಾವಾಹಿಯಲ್ಲಿ ಭಾರತಿ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ಇಲ್ಲೂ ಭಾರತಿ ತನ್ನ ನಿಜ ಜೀವನದ ಪತಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಪಾತ್ರ ಮಾಡುತ್ತಿರುವುದು. ಆದರೆ ಪಾತ್ರದ ಹೆಸರು ಮಾತ್ರ ಬೇರೆ.

ಇಲ್ಲಿ ಭಾರತಿ ಪಾತ್ರದ ಹೆಸರು ಶ್ರೀಮತಿ ದೇವಿ ಅನ್ನಪೂರ್ಣೇಶ್ವರಿ. ವಿಷ್ಣುವರ್ಧನ್ ಅವರನ್ನು ಇಲ್ಲಿ 'ಸಿಂಹಾದ್ರಿಯ ಸಿಂಹ' ಮೂಲಕ ಪ್ರತಿಬಿಂಬಿಸಲಾಗುತ್ತದೆ. ಅದೇ ದಿರಿಸು, ಒಂದಷ್ಟು ಫೋಟೋಗಳನ್ನು ತೋರಿಸಿ ದೊಡ್ಡ ರುದ್ರೇ ಗೌಡ ಎಂಬ ಪಾತ್ರಕ್ಕೆ ವಿಷ್ಣುವರ್ಧನ್ ಅವರನ್ನು ತೋರಿಸಿ ನೆನಪು ಮಾಡಿಕೊಳ್ಳಲಾಗುತ್ತದೆ.

ಖುಷಿಯಾಗಿದೆ: ಭಾರತಿ
ಕಿರುತೆರೆ ಮರು ಪ್ರವೇಶವನ್ನು, ಅದರಲ್ಲೂ ವಿಷ್ಣುವರ್ಧನ್ ಅವರ ಪತ್ನಿಯ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಬೋನಸ್ ಎಂದಿದ್ದಾರೆ ಭಾರತಿ ವಿಷ್ಣುವರ್ಧನ್. ಅದೇ ಕಾರಣದಿಂದ ತಾನು ಈ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಿರುತೆರೆಗೆ ಮತ್ತೆ ಬರಬೇಕೆಂಬ ಆಫರ್ ಬಂದಾಗ, ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೆ. ನನ್ನ ಸಮಯದ ಅಭಾವವೂ ಅಡ್ಡ ಬಂದಿತ್ತು. ಆದರೆ ನಿರ್ದೇಶಕ ವಿಜಯ್ ಕುಮಾರ್, ಇವೆಲ್ಲಕ್ಕೂ ಹೊಂದಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು. ಹಾಗಾಗಿ ಒಪ್ಪಿಕೊಂಡೆ.

ನನಗಿನ್ನೂ ಕಥೆ ಪೂರ್ತಿಯಾಗಿ ಗೊತ್ತಾಗಿಲ್ಲ. ನನ್ನ ಪಾತ್ರ ಏನು ಅನ್ನೋದು ಮಾತ್ರ ಗೊತ್ತು. ಜಮೀನ್ದಾರರ ವಂಶದ ಕಥೆ, ದೊಡ್ಡ ಕುಟುಂಬ, ಯಾರೆಲ್ಲ ಇರುತ್ತಾರೆ ಎಂಬ ಕಲ್ಪನೆಯೇ ಇಲ್ಲ. ಹೋಗುತ್ತಾ ಹೋಗುತ್ತಾ ಗೊತ್ತಾಗಬೇಕು. ಖಂಡಿತಾ ಎಲ್ಲರಿಗೂ ಅಷ್ಟ ಆಗುವ ಭರವಸೆ ನನ್ನಲ್ಲಿದೆ. ಈ ಪಾತ್ರದಿಂದ ಸಮಾಜಕ್ಕೊಂದು ಸಂದೇಶ ರವಾನಿಸುವ ಆಸೆಯೂ ಈಡೇರಿದಂತಾಗುತ್ತದೆ ಎಂದು ಭಾರತಿ ಹೇಳಿದರು.

ಅಂದ ಹಾಗೆ, ಭಾರತಿ ಇದೇ ಮೊದಲ ಬಾರಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದಲ್ಲ. ದಶಕಗಳ ಹಿಂದೆ ಆರ್.ಎನ್. ಜಯಗೋಪಾಲ್ ಅವರ 'ಜನನಿ' ಧಾರಾವಾಹಿಯಲ್ಲೂ ಭಾರತಿ ನಟಿಸಿದ್ದರು. ಈಗ ಏನಿದ್ದರೂ ಮರು ಪ್ರವೇಶ.

ವೆಬ್ದುನಿಯಾವನ್ನು ಓದಿ