ತಪ್ಪಾಗಿದ್ದರೆ ಕ್ಷಮಿಸಿ, ನಾನು ನಿಮ್ಮವನು: 'ಕೋಟ್ಯಧಿಪತಿ' ಪುನೀತ್

PR
'ಕನ್ನಡದ ಕೋಟ್ಯಧಿಪತಿ' ಗೇಮ್ ಶೋ ಮುಕ್ತಾಯ ಎಂಬಷ್ಟಕ್ಕೇ ಗ್ರಾಂಡ್ ಫಿನಾಲೆಯನ್ನು ಪರಿಗಣಿಸದಂತೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿನ್ನೆಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಗ್ಯಾಲರಿಯಲ್ಲಿ ಕುಳಿತಿದ್ದವರು ಮಾತ್ರವಲ್ಲ, ಟಿವಿ ಮುಂದಿದ್ದವರ ಕಣ್ಣಾಲಿಗಳೂ ಮಂಜಾಗಿದ್ದವು. ಇದುವರೆಗೆ ವಾರದಲ್ಲಿ ನಾಲ್ಕು ದಿನ ಸಿಗುತ್ತಿದ್ದ ಒಂದೂವರೆ ಗಂಟೆಯ ಪುನೀತ್ ದರ್ಶನಕ್ಕೆ ಇನ್ನೆಲ್ಲಿ ಹೋಗಬೇಕು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ನೆಲೆಸಿರುವಂತಿತ್ತು.

ನಿನ್ನೆ ರಾತ್ರಿ ಅಂದರೆ ಜುಲೈ 26ರಂದು 'ಕನ್ನಡದ ಕೋಟ್ಯಧಿಪತಿ'ಯ ಮೊದಲ ಕಂತಿನ ಕೊನೆಯ ಸಂಚಿಕೆ. ಈ ಹಿಂದಿನ ಸಂಚಿಕೆಗಳಲ್ಲಿ ಹಾಟ್ ಸೀಟ್‌ಗೆ ಬಂದಿದ್ದ ಎಲ್ಲಾ ಸ್ಪರ್ಧಿಗಳೂ ವೀಕ್ಷಕರ ಗ್ಯಾಲರಿಯಲ್ಲಿದ್ದರು. ಈ ಹಿಂದೆ ಹಾಟ್ ಸೀಟ್‌ಗೆ ಬಂದು ಹೋಗಿದ್ದ ಸ್ಪರ್ಧಿಗೆ ಮತ್ತೆ ನಿನ್ನೆ ಅವಕಾಶ ಕೊಟ್ಟದ್ದು ವಿಶೇಷವೆನಿಸಿತು. ಸ್ಪರ್ಧಿಯ ಮಗುವೊಂದರ ಚಿಕಿತ್ಸೆಗಾಗಿ ಹಣ ಹೊಂದಿಸುವ ಆಟ ಅವರದ್ದಾಗಿತ್ತು.

ಈ ನಡುವೆ ರಾಘವೇಂದ್ರ ರಾಜ್‌ಕುಮಾರ್ 'ಕೋಟ್ಯಧಿಪತಿ'ಯ ವೇದಿಕೆಗೆ ಬಂದರು. ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿ, ಹಾಡಿ, ಡೈಲಾಗುಗಳನ್ನು ಹೇಳಿ ರಂಜಿಸಿದರು. ನಂತರ ಪುನೀತ್ ಪತ್ನಿ ಅಶ್ವಿನಿ ರೇವಂತ್ ನಾಚುತ್ತಲೇ ವೇದಿಕೆಗೆ ಬಂದರು. ನನ್ನ ಗೃಹಲಕ್ಷ್ಮಿ ಎಂದು ಪರಿಚಯಿಸಿ, ಅವರಷ್ಟೇ ನಾಚಿಕೊಂಡರು ಪುನೀತ್.

ಇದುವರೆಗಿನ ಎಲ್ಲಾ 80 ಎಪಿಸೋಡುಗಳಲ್ಲಿ ಹಾಟ್ ಸೀಟ್‌ಗೆ ಬಂದ ಕೆಲವರ ಅನುಭವಗಳನ್ನು ಕೇಳಿದ ಪುನೀತ್ ಕೆಲವರ ಪಾಲಿಗೆ ಮಗ, ಇನ್ನು ಕೆಲವರ ಪಾಲಿಗೆ ಅಣ್ಣ-ತಮ್ಮರಾದರು. ತನ್ನಿಂದ ಯಾರಿಗಾದರೂ ಯಾವುದಾದರೂ ಹಂತದಲ್ಲಿ ನೋವಾಗಿದ್ದರೆ ಕ್ಷಮೆಯಿರಲಿ, ಆ ಕ್ಷಣದಲ್ಲಿ ನನಗೆ ತೋಚಿದ ಮಾತುಗಳನ್ನು ಆಡಿ ನಿಮ್ಮ ಕಷ್ಟ-ದುಃಖಗಳನ್ನು ಮರೆಸುವ, ನಗಿಸುವ ಯತ್ನವನ್ನಷ್ಟೇ ಮಾಡಿದ್ದೇನೆ ಎಂದು ಕೇಳಿಕೊಂಡರು ಪುನೀತ್.

ಪುನೀತ್ ಪ್ರತಿ ಮಾತುಗಳೂ ಭಾರವೆನಿಸುತ್ತಿದ್ದವು. ಅವರಿಂದ ಸಾಂತ್ವನಕ್ಕೊಳಗಾದವರು ತಲೆ ಕೆಳಗೆ ಹಾಕಿ ತಮ್ಮ ಬೇಸರ ವ್ಯಕ್ತಪಡಿಸಿದರು. ಇದು ಗ್ರಾಂಡ್ ಫಿನಾಲೆ ಎಂಬ ಸಂಭ್ರಮದ ಕಾರ್ಯಕ್ರಮವಾಗಿರಬಹುದು, ಆದರೆ ನಮ್ಮ ಪಾಲಿಗೆ ಇದು ದುಃಖದ ಕಾರ್ಯಕ್ರಮ ಎಂದು ಗ್ಯಾಲರಿಯಲ್ಲಿದ್ದವರು ತಮ್ಮ ಮನದಾಳವನ್ನು ಹಂಚಿಕೊಂಡರು.

ಮತ್ತೆ ಬರುತ್ತೇನೆ, ಇದು ಇಲ್ಲಿಗೆ ಕೊನೆಯಲ್ಲ; ಈ ಕಂತಷ್ಟೇ ಮುಗಿದಿದೆ. ನಾನು ಇಲ್ಲಿಂದ ನಿಮ್ಮ ಪ್ರೀತಿಯನ್ನು ಪಡೆದುಕೊಂಡಿದ್ದೇನೆ, ಕೋಟ್ಯಂತರ ಕನ್ನಡಿಗರ ಅಭಿಮಾನವನ್ನು ಗಿಟ್ಟಿಸಿಕೊಂಡಿದ್ದೇನೆ. ಕಾರ್ಯಕ್ರಮವನ್ನು ಹೇಗೆ ನಡೆಸಿಕೊಡುತ್ತೇನೋ ಎಂಬ ಶಂಕೆ ನನ್ನಲ್ಲಿತ್ತು. ಆದರೆ ಯಶಸ್ವಿಯಾಗಿದೆ. ಇದಕ್ಕೆ ಕಾರಣ ನೀವು ಎಂದ ಪುನೀತ್ 'ಶುಭಂ' ಮೂಡುವ ಮೊದಲು ಕತ್ತಲಲ್ಲಿ ಮಾಯವಾದರು.

ವೆಬ್ದುನಿಯಾವನ್ನು ಓದಿ