ಪುನೀತ್ ರಾಜ್‌ಕುಮಾರ್ ಕನ್ನಡದ ಕೋಟ್ಯಧಿಪತಿ ಮತ್ತೆ ಆರಂಭ

PR
ಈ ವರ್ಷದ ಮಾರ್ಚ್ 12ರಿಂದ ಜುಲೈ 26ರವರೆಗೆ ವಾರದಲ್ಲಿ ನಾಲ್ಕು ದಿನ ಒಂದೂವರೆ ಗಂಟೆ ಕಾಲ ಕನ್ನಡದ ಪ್ರೇಕ್ಷಕರನ್ನು ಟಿವಿ ಎದುರಿನಿಂದ ಬೇರೆ ಕಡೆ ಹೋಗದಂತೆ ಮಾಡಿದ್ದ 'ಕನ್ನಡದ ಕೋಟ್ಯಧಿಪತಿ' ಮತ್ತೆ ಬರುತ್ತಿದೆ. ಅಂದು ಭರವಸೆ ನೀಡಿ ಹೋಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸೆಕೆಂಡ್ ಇನ್ನಿಂಗ್ಸ್‌ಗೆ ರೆಡಿಯಾಗಿದ್ದಾರೆ!

ಹೌದು, 'ಕನ್ನಡದ ಕೋಟ್ಯಧಿಪತಿ-2' ಶುರುವಾಗುತ್ತಿದೆ. ಆದರೆ ಯಾವಾಗ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಅದರ ತಯಾರಿ ನಡೆಯುತ್ತಿದೆ. ಜನವರಿ-ಫೆಬ್ರವರಿ ಹೊತ್ತಿಗೆ ಟಿವಿ ಪರದೆ ಮೇಲೆ, "ಕೋಟ್ಯಧಿಪತಿ-2 ನಿರೀಕ್ಷಿಸಿ" ಎಂದು ಮೂಡಿ ಬರಬಹುದು.

'ಬಿಗ್ ಸಿನರ್ಜಿ' ನಿರ್ಮಾಣದ ಈ ಕಾರ್ಯಕ್ರಮ ಮತ್ತೆ ಸುವರ್ಣ ವಾಹಿನಿಯಲ್ಲೇ ಪ್ರಸಾರವಾಗುತ್ತಿದೆ. ಸದ್ಯ ಕಾರ್ಯಕ್ರಮದ ನಿರ್ಮಾಪಕರು ಚಾನೆಲ್ ಬದಲಾಯಿಸುವ ಗೋಜಿಗೆ ಹೋಗಿಲ್ಲ. ನಿರ್ದೇಶಕ ಗುರುಪ್ರಸಾದ್ ಇಲ್ಲೂ ಇಡೀ ಕಾರ್ಯಕ್ರಮದ ಹೊಣೆ ಹೊತ್ತು ಕೊಳ್ಳುವ ಸಾಧ್ಯತೆಗಳಿವೆ.

ಕೋಟ್ಯಧಿಪತಿ ಮೊದಲ ಆವೃತ್ತಿಯಲ್ಲಿ ರಮ್ಯಾ, ಲಕ್ಷ್ಮಿ, ರವಿಚಂದ್ರನ್, ಅನಿಲ್ ಕುಂಬ್ಳೆ ಮುಂತಾದ ಜನಪ್ರಿಯರು ಅತಿಥಿಗಳಾಗಿ ಭಾಗವಹಿಸಿದ್ದರು. ಒಟ್ಟು 80 ಕಂತುಗಳಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಒಂದು ಕೋಟಿ ಯಾರೂ ಗೆದ್ದಿರಲಿಲ್ಲ. ಆದರೆ ಪಂಪಣ್ಣ ಮಾಸ್ತರ್ ಎಂಬವರು 50 ಲಕ್ಷ ರೂ. ಕಿಸೆಗೆ ಹಾಕಿಕೊಂಡಿದ್ದರು.

ಕೋಟ್ಯಧಿಪತಿಯಿಂದಾಗಿ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಪುನೀತ್, ಕಾರ್ಯಕ್ರಮದ ಕೊನೆಯಲ್ಲಂತೂ ಭಾವುಕರಾಗಿದ್ದರು. ಮತ್ತೆ ಬಂದೇ ಬರುತ್ತೇನೆ ಎಂದು ಭರವಸೆ ಕೊಟ್ಟು ಹೋಗಿದ್ದರು. ಈಗಿನ ಲೆಕ್ಕಾಚಾರಗಳ ಪ್ರಕಾರ, 'ಯಾರೇ ಕೂಗಾಡಲಿ' ಡಿಸೆಂಬರ್ 20ಕ್ಕೆ ಬಿಡುಗಡೆಯಾಗುತ್ತಿದೆ. ಅದರ ಪ್ರಚಾರ, ನಂತರದ ಕಾರ್ಯಕ್ರಮಗಳನ್ನು ಮುಗಿಸಿದ ನಂತರ ಪುನೀತ್ ಕೋಟ್ಯಧಿಪತಿಯತ್ತ ಹೊರಳಬಹುದು.

ಕೋಟ್ಯಧಿಪತಿ ಕಾರ್ಯಕ್ರಮ ಆರಂಭವಾಗಬೇಕಾದರೆ, ಅದಕ್ಕೆ ಸಾಕಷ್ಟು ತಯಾರಿ ನಡೆಯಬೇಕು. ಪ್ರಶ್ನೆಗಳು ರೆಡಿಯಾಗಬೇಕು, ಆಡಿಷನ್ ನಡೆಯಬೇಕು, ಈ ಬಾರಿ ಹೊಸತೇನು ಎಂಬ ಚಿಂತನೆ ನಡೆಯಬೇಕು. ಇವೆಲ್ಲದಕ್ಕೂ ಒಂದೆರಡು ತಿಂಗಳು ಬೇಕೇ ಬೇಕು. ಹಾಗಾಗಿ ಮಾರ್ಚ್-ಏಪ್ರಿಲ್ ಹೊತ್ತಿಗಷ್ಟೇ ಮತ್ತೆ ಕೋಟ್ಯಧಿಪತಿ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ