ಮಾ.11ಕ್ಕೆ 'ಕೋಟ್ಯಧಿಪತಿ' ಪುನೀತ್ ಬರ್ತಾರೆ: ನೀವು ರೆಡಿನಾ?

PR
ಕನ್ನಡ ಜನಪ್ರಿಯ ರಿಲಾಯಿಲಿಟಿ ಶೋ 'ಕನ್ನಡದ ಕೋಟ್ಯಧಿಪತಿ' ಎರಡನೇ ಆವೃತ್ತಿ ರೆಡಿಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಡೆಸಿಕೊಡುವ ಈ ಕಾರ್ಯಕ್ರಮ ಮಾರ್ಚ್ 11ರ ಸೋಮವಾರವೇ ಆರಂಭ. ಪ್ರತಿದಿನ ಸೋಮವಾರದಿಂದ ಗುರುವಾರದವರೆಗೆ ರಾತ್ರಿ 8ರಿಂದ 9 ಗಂಟೆಯವರೆಗೆ ಸುವರ್ಣ ಮನರಂಜನಾ ವಾಹಿನಿಯಲ್ಲಿ ಪ್ರಸಾರ.

ಮೊದಲನೇ ಆವೃತ್ತಿಯಲ್ಲಿ ಟಿವಿ ವೀಕ್ಷಕರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಮಾಡಿದ್ದ ಪುನೀತ್ ರಾಜ್‌ಕುಮಾರ್ ಈ ಬಾರಿ ಹೇಗೆ ಬರುತ್ತಾರೆ? ಏನಾದರೂ ಬದಲಾವಣೆಗಳು ಇವೆಯೇ ಎನ್ನುವುದು ಸದ್ಯದ ಕುತೂಹಲ. ಒಟ್ಟು 79 ಸಂಚಿಕೆಗಳಲ್ಲಿ 8 ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ವಾರದಲ್ಲಿ ನಾಲ್ಕು ಸಂಚಿಕೆಗಳು ಪ್ರಸಾರವಾಗಲಿವೆ.

ಎಲ್ಲ 30 ಜಿಲ್ಲೆಗಳಿಂದ ಸುಮಾರು 1200 ಸ್ಪರ್ಧಿಗಳನ್ನು ಆಡಿಷನ್ ಮಾಡಲಾಗಿದೆ. ಈ ಬಾರಿ ಕನ್ನಡ ಸಂಸ್ಕೃತಿ ಮತ್ತು ಜಿಲ್ಲೆಗಳಿಗೆ ಸಂಬಂಧಪಟ್ಟ ಪ್ರಶ್ನೆಗಳೇ ಹೆಚ್ಚು ಇರುವುದು ವಿಶೇಷ. ಪ್ರತಿವಾರ ನಿರ್ದಿಷ್ಟ ಜಿಲ್ಲೆಯೊಂದನ್ನು ಆಯ್ಕೆ ಮಾಡಿ, ಅದರ ಬಗ್ಗೆ ಪ್ರಶ್ನೆ ಹಾಕಲಾಗುತ್ತದೆ. ಹಾಟ್ ಸೀಟ್‌ನಲ್ಲಿ ಕುಳಿತುಕೊಳ್ಳುವ ಅದೃಷ್ಟ ಪಡೆದವರು ಆ ಪ್ರಶ್ನೆಗಳಿಗೆ ಉತ್ತರಿಸಬೇಕು.

ಮೊದಲ ಅವಧಿಯಲ್ಲಿ ವೀಕ್ಷಕರು ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ್ದಾರೆ. ಈ ಬಾರಿಯೂ ಅದೇ ರೀತಿಯ ಬೆಂಬಲ ನಿರೀಕ್ಷೆಯಲ್ಲಿದ್ದೇನೆ. ಇಲ್ಲಿ ನನ್ನದು ಏನೂ ಇಲ್ಲ. ನನ್ನ ಹಿಂದೆ ಶ್ರಮಿಸುತ್ತಿರುವ ನೂರಾರು ಮಂದಿಯಿಂದಾಗಿ ಕಾರ್ಯಕ್ರಮ ಮೂಡಿ ಬರುತ್ತಿದೆ. ಈ ಅವಕಾಶ ನೀಡಿರುವ ಸುವರ್ಣ ವಾಹಿನಿಗೆ ಧನ್ಯವಾದಗಳು ಎಂದು 'ಕನ್ನಡದ ಕೋಟ್ಯಧಿಪತಿ' ಪ್ರಸಾರ ಸಂಬಂಧ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪುನೀತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸುವರ್ಣ ಮನರಂಜನಾ ವಾಹಿನಿಯ ಬಿಸಿನೆಸ್ ಹೆಡ್ ಅನೂಪ್ ಚಂದ್ರಶೇಖರ್, ಬಿಗ್ ಸಿನರ್ಜಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಬಸು, ರಾಘವೇಂದ್ರ ರಾಜ್‌ಕುಮಾರ್ ಉಪಸ್ಥಿತರಿದ್ದರು.

ಅಂದ ಹಾಗೆ, ಮೊದಲ ವಾರ ಬೀದರ್ ಜಿಲ್ಲೆಯ ಕುರಿತಾದ ಪ್ರಶ್ನೆಗಳನ್ನು ಪುನೀತ್ ಕೇಳಲಿದ್ದಾರೆ.

ವೆಬ್ದುನಿಯಾವನ್ನು ಓದಿ