ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ಭಾಗ್ಯಲಕ್ಷ್ಮಿ ಈಗ ಇಂಟ್ರೆಸ್ಟಿಂಗ್ ಎಪಿಸೋಡ್ ಪ್ರಸಾರವಾಗುತ್ತಿದೆ. ಆದರೆ ಈ ಎಪಿಸೋಡ್ ನೋಡಿ ಇದು ಯಜಮಾನ ಸಿನಿಮಾ ಕಾಪಿ ಎನ್ನುತ್ತಿದ್ದಾರೆ ಪ್ರೇಕ್ಷಕರು.
ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಈಗ ನಾಯಕಿ ಭಾಗ್ಯಾ ತನ್ನ 35 ನೇ ವಯಸ್ಸಿನಲ್ಲಿ ಎಸ್ಎಸ್ಎಲ್ ಸಿ ಪಾಸು ಮಾಡಿಕೊಂಡು ಈಗ ತನ್ನ ಜೀವನ ನಿರ್ವಹಣೆಗಾಗಿ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ತನ್ನ ಸ್ವಂತ ಪ್ರತಿಭೆಯಿಂದಾಗಿ ಶೆಫ್ ಆಗಿ ಕೆಲಸ ಮಾಡುತ್ತಿದ್ದಾರೆ.
ಆಕೆಯ ಸಾಧನೆಯನ್ನು ಮೆಚ್ಚಿ ಹೋಟೆಲ್ ನವರೇ ಆಕೆಯ ಸಾಧನೆಯನ್ನು ಸನ್ಮಾನಿಸುತ್ತಿದ್ದಾರೆ. ಈ ಸನ್ನಿವೇಶಕ್ಕೆ ಹಿರಿಯ ನಟ ಶ್ರೀನಾಥ್ ಅವರು ಬಂದಿದ್ದಾರೆ. ಆದರೆ ಭಾಗ್ಯ ಕೆಲಸ ಮಾಡುತ್ತಿದ್ದ ವಿಷಯವನ್ನು ಮನೆಯವರಲ್ಲಿ ಮುಚ್ಚಿಟ್ಟಿದ್ದರು. ಆದರೆ ಟಿವಿಯಲ್ಲಿ ಆಕೆಯ ಬಗ್ಗೆ ಸುದ್ದಿ ನೋಡಿ ಅತ್ತೆ ಕುಸುಮಾ ಮತ್ತು ಮನೆಯವರಿಡೀ ಸನ್ಮಾನ ನಡೆಯುತ್ತಿರುವ ಸ್ಥಳಕ್ಕೆ ಬರುತ್ತಾರೆ. ಆದರೆ ಅಲ್ಲಿ ಅತ್ತೆ ಕುಸುಮಾಗೆ ಅವಮಾನವಾಗುತ್ತದೆ.
ಇದನ್ನು ನೋಡಿ ಭಾಗ್ಯ ಅತ್ತೆಯನ್ನು ಕರೆದುಕೊಂಡು ಬಂದು ವೇದಿಕೆಯಲ್ಲಿ ಕೂರಿಸಿ ನನ್ನ ಸಾಧನೆಗೆಲ್ಲಾ ಇವರೇ ಕಾರಣ ಎಂದು ಕ್ರೆಡಿಟ್ ಕೊಡುತ್ತಾಳೆ. ಸೊಸೆಯ ಮಾತು ಕೇಳಿ ಅತ್ತೆ ಕುಸುಮಾ ಫುಲ್ ಖುಷಿಯಾಗುತ್ತಾರೆ. ಈ ಸನ್ನಿವೇಶವನ್ನು ನೋಡಿ ನೆಟ್ಟಿಗರು ಇದು ಥೇಟ್ ಕನಸುಗಾರ ಮತ್ತು ಯಜಮಾನ ಸಿನಿಮಾದ ಕಾಪಿ ಎಂದು ತಮಾಷೆ ಮಾಡಿದ್ದಾರೆ.
ಸಾಮಾನ್ಯವಾಗಿ ಧಾರವಾಹಿಗಳ ಕೆಲವೊಂದು ಸನ್ನಿವೇಶಗಳನ್ನು ಸಿನಿಮಾ ಕತೆಯನ್ನೇ ಹೋಲುತ್ತಿರುತ್ತದೆ. ಇದೀಗ ಭಾಗ್ಯಲಕ್ಷ್ಮಿ ಇದೇ ಕಾರಣಕ್ಕೆ ವೀಕ್ಷಕರಿಂದ ಟ್ರೋಲ್ ಆಗಿದೆ.