ಕಲರ್ಸ್ ಕನ್ನಡ ವಾಹಿನಿಯಿಂದ ’ಬಿಗ್ ಬಾಸ್’ ಔಟ್!

ಗುರುವಾರ, 12 ಜನವರಿ 2017 (09:33 IST)
ಕಲರ್ಸ್ ಕನ್ನಡದ ಹೆಮ್ಮೆಯ ರಿಯಾಲಿಟಿ ಶೋ `ಬಿಗ್‍ಬಾಸ್' ಈಗ ಅಂತಿಮ ಹಂತ ತಲುಪಿದೆ. ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಾ ಬರುತ್ತಿರುವ ಹಾಗೆ ಪೈಪೋಟಿ ಹೆಚ್ಚಾಗುತ್ತಾ ಹೋಗುತ್ತಿದೆ. ಕುತೂಹಲ ಗರಿಗೆದರುತ್ತಿರುವ ಈ ಹಂತದಲ್ಲಿ ಬಿಗ್‍ಬಾಸ್‍ನ ಕೊನೆಯ ಎರಡು ವಾರಗಳು (ಜನವರಿ 16 ರಿಂದ) ಕಲರ್ಸ್ ಸಮೂಹದ ಹೊಸ ಚಾನೆಲ್ `ಸೂಪರ್' ನಲ್ಲಿ ಪ್ರಸಾರವಾಗಲಿದೆ.
 
ಬಿಗ್‍ಬಾಸ್ ಎಂದರೆ ಮನರಂಜನೆ. ಬಿಗ್‍ಬಾಸ್ ಎಂದರೆ ಕುತೂಹಲ. ಬಿಗ್‍ಬಾಸ್ ಎಂದರೆ ಅನಿರೀಕ್ಷಿತ ತಿರುವುಗಳು. ಕೆಲವು ವಾರಗಳ ಹಿಂದೆ ಬಿಗ್‍ಬಾಸ್ ನಿರೂಪಕರಾದ ಕಿಚ್ಚ ಸುದೀಪ್ ಎಲ್ಲ ಸ್ಪರ್ಧಿಗಳಿಗೆ ಒಂದು ಮಾತು ಹೇಳಿದ್ದರು - Expect the Enexpected (ನಿರೀಕ್ಷಿಸದೆ ಇರುವುದನ್ನು ನಿರೀಕ್ಷಿಸಿ) ಎಂದು. ಈ ಮಾತು ಆ ವಾರದ ಮಟ್ಟಿಗೆ ಸತ್ಯವಾಗಿತ್ತು. ಆದರೆ ಅದು ಅಲ್ಲಿಗೆ ಮುಗಿದಿಲ್ಲ. ಇಡೀ ಸೀಸನ್‍ಗೂ ಅನ್ವಯಿಸುತ್ತದೆ.  
 
ಕನ್ನಡ ಬಿಗ್‍ಬಾಸ್‍ನ ಎಲ್ಲ ಸೀಸನ್‍ಗಳ ಪೈಕಿ ಈ ಸೀಸನ್‍ನಷ್ಟು ಕುತೂಹಲಕಾರಿ ತಿರುವುಗಳು ಯಾವ ಸೀಸನ್‍ನಲ್ಲೂ ಇರಲಿಲ್ಲ. ಗೆಸ್ಟ್ ಎಂಟ್ರಿಗಳು, ಹೊಸ ಟ್ವಿಸ್ಟ್‍ಗಳು, ವಿನೂತನ ಟಾಸ್ಕ್‍ಗಳು ಮತ್ತು ಭಾರೀ ಕಂಟೆಸ್ಟಂಟ್‍ಗಳ ಮೂಲಕ ಈಗಾಗಲೇ ಜನಪ್ರಿಯವಾಗಿರುವ ಈ ಸೀಸನ್ ಇನ್ನೇನು ಮುಗಿಯಿತು ಅನ್ನುವಾಗ ಕಲರ್ಸ್ ಕನ್ನಡ ಅತಿ ದೊಡ್ಡ ಟ್ವಿಸ್ಟ್ ಕೊಟ್ಟಿತು. 
 
ಅದೇನೆಂದರೆ ಬಿಗ್‍ಬಾಸ್‍ನ ಗ್ರ್ಯಾಂಡ್ ಫಿನಾಲೆ ಜನವರಿ 15ಕ್ಕೆ ಬದಲಾಗಿ ಜನವರಿ 29 ರಂದು ನಡೆಯಲಿದೆ ಎಂದು ಘೋಷಿಸಿತು. ಈ ನಿರ್ಧಾರವನ್ನು ಸ್ಪರ್ಧಿಗಳು ಮತ್ತು ವೀಕ್ಷಕರೆಲ್ಲರೂ ತುಂಬು ಹೃದಯದಿಂದ ಸ್ವಾಗತಿಸಿರುವುದೇ ಕಾರ್ಯಕ್ರಮದ ಜನಪ್ರಿಯತೆಗೆ ಹಿಡಿದಿರುವ ಕೈಗನ್ನಡಿ. 
 
ಬಿಗ್‍ಬಾಸ್ ಶೋ ಜನವರಿ 16ರಿಂದ ಸೂಪರ್ ಚಾನೆಲ್‍ನಲ್ಲಿ ರಾತ್ರಿ 9 ಗಂಟೆಗೆ ವಾರದ ಏಳೂ ದಿನ ನಡೆಯಲಿದೆ. ಬಿಗ್‍ಬಾಸ್ ಎಪಿಸೋಡ್‍ನಲ್ಲಿ ನೋಡದೆ ಇರುವ ದೃಶ್ಯಗಳ ಸಂಗಮವಾಗಿ ಬಿಗ್‍ಬಾಸ್ ನೈಟ್‍ಶಿಪ್ಟ್ ಕೂಡಾ ಎಂದಿನಂತೆ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ.
 
ಕಲರ್ಸ್ ಕನ್ನಡ ಮತ್ತು ಸೂಪರ್ ವಾಹಿನಿಗಳ ಈ ಆಶಾದಾಯಕ ಬೆಳವಣಿಗೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ರೀಜನಲ್ ಚಾನಲ್‍ಗಳ ಸಿನಿಯರ್ ಇ.ವಿ.ಪಿ. ರವೀಶ್‍ಕುಮಾರ್ ಹೀಗೆ ಹೇಳುತ್ತಾರೆ- ಬಿಗ್‍ಬಾಸ್ ಎನ್ನುವುದು ಒಂದು ರಿಯಾಲಿಟಿ ಶೋಗಿಂತ ತುಂಬಾ ಎತ್ತರಕ್ಕೆ ಬೆಳೆದಿದೆ. ವೀಕ್ಷಕರು ಮತ್ತು ಜಾಹೀರಾತುದಾರರು ಈ ಶೋ ಬಗ್ಗೆ ತಮ್ಮ ಅಗಾಧವಾದ ಪ್ರೀತಿ ಮತ್ತು ಒಲವನ್ನು ವ್ಯಕ್ತಪಡಿಸಿದ್ದಾರೆ. 
 
ಮಾತ್ರವಲ್ಲದೆ ಇದರ ಸ್ಪರ್ಧಿಗಳು ರಾಜ್ಯದೆಲ್ಲೆಡೆ ಮನೆಮಾತಾಗಿದ್ದಾರೆ. ಬಿಗ್‍ಬಾಸ್‍ಗೆ ದೊರೆತ ಜನಮನ್ನಣೆ, ಇನ್ನೆರಡು ವಾರಗಳ ಕಾಲ ಈ ಜನಪ್ರಿಯ ಶೋವನ್ನು ಮುಂದುವರಿಸುವಂತೆ ನಮ್ಮನ್ನು ಪ್ರೇರೇಪಿಸಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು ಈ ಮೊದಲೇ ನಿರ್ಧಾರವಾಗಿತ್ತು. ನಮ್ಮ ಸಮೂಹದ್ದೇ ಆಗಿರುವ 'ಸೂಪರ್' ಚಾನೆಲ್‍ಗೆ ಈ ಕಾರ್ಯಕ್ರಮವನ್ನು ಸ್ಥಳಾಂತರಿಸುವ ಬಗ್ಗೆ ಬಹಳ ಯೋಚಿಸಿ ನಿರ್ಧರಿಸಿದ್ದೇವೆ. 
 
ಈಗ ನಾವು ಬಿಗ್‍ಬಾಸ್ ಸೀಸನ್ 4ರ ಅಂತಿಮ ಹಂತ ತಲುಪಿದ್ದೇವೆ. ಕಲರ್ಸ್ ಕನ್ನಡದಲ್ಲಿ 'ರಾಧಾ ರಮಣ' ಮತ್ತು 'ಪದ್ಮಾವತಿ' ಎಂಬ ಎರಡು ಹೊಸ ಧಾರಾವಾಹಿಗಳನ್ನು ಆರಂಭಿಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದೇವೆ. ಕನ್ನಡ ಟೆಲಿವಿಷನ್ ವೀಕ್ಷಕರಿಗೆ ಸಂಪೂರ್ಣ ಮನೋರಂಜನೆ ನೀಡುವ ತಾಣಗಳಾಗಿ ಕಲರ್ಸ್ ಕನ್ನಡ ಮತ್ತು ಸೂಪರ್ ಹೊರಹೊಮ್ಮಲಿದೆ ಎಂಬ ವಿಶ್ವಾಸ ನಮ್ಮದು."
 
ಕಲರ್ಸ್ ಕನ್ನಡ ಹಾಗೂ ಸೂಪರ್ ಚಾನೆಲ್‍ಗಳ ಬ್ಯುಸಿನೆಸ್ ಹೆಡ್ ಹಾಗೂ ಬಿಗ್‍ಬಾಸ್‍ನ ನಿರ್ದೇಶಕರೂ ಆಗಿರುವ ಪರಮೇಶ್ವರ ಗುಂಡ್ಕಲ್ ಹೀಗೆ ಹೇಳುತ್ತಾರೆ, “ಐದು ತಿಂಗಳ ಹಿಂದೆ ಆರಂಭವಾದ ನಮ್ಮ ಹೊಸ ಚಾನೆಲ್ ಸೂಪರ್ ಈ ಅಲ್ಪಾವಧಿಯಲ್ಲಿಯೇ ಕನ್ನಡ ಟೆಲಿವಿಷನ್ ವೀಕ್ಷಕರ ಮನಗೆದ್ದಿದೆ. ವಿನೂತನ ಕಾರ್ಯಕ್ರಮಗಳು ಮತ್ತು ಹೊಸ ಸಿನಿಮಾಗಳ ಪ್ರಸಾರದಿಂದ ಕಳೆದ ಮೂರು ತಿಂಗಳಲ್ಲಿ ಸೂಪರ್ ವೀಕ್ಷಕರ ಸಂಖ್ಯೆ ದ್ವಿಗುಣಗೊಂಡಿದೆ. ಈಗ ಬಿಗ್‍ಬಾಸ್ ನ ಪ್ರಸಾರದೊಂದಿಗೆ ಚಾನೆಲ್ ಇನ್ನೊಂದು ಹಂತಕ್ಕೆ ಏರಲಿದೆ ಎಂಬ ವಿಶ್ವಾಸ ನಮ್ಮದು." ಬಿಗ್‍ಬಾಸ್ ಕಾರ್ಯಕ್ರಮವನ್ನು ಸೂಪರ್‍ನಲ್ಲಿ ಪ್ರತಿ ದಿನ ರಾತ್ರಿ 9 ಗಂಟೆಗೆ ಮಿಸ್ ಮಾಡದೆ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ