ಕಲರ್ಸ್ ಕನ್ನಡದಲ್ಲಿ ಹೊಸ ಕತೆ `ಪದ್ಮಾವತಿ'

ಬುಧವಾರ, 1 ಫೆಬ್ರವರಿ 2017 (10:17 IST)
ಫೆಬ್ರವರಿ 6 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9:30 ಕ್ಕೆ ಮನರಂಜನೆಯ ವಿಷಯ ಬಂದರೆ ಕನ್ನಡದ ಅಪ್ರತಿಮ ಮನೋರಂಜನಾ ಚಾನೆಲ್ ಕಲರ್ಸ್ ಕನ್ನಡ ವೀಕ್ಷಕರನ್ನು ಯಾವತ್ತೂ ನಿರಾಸೆ ಮಾಡುವುದಿಲ್ಲ. ಬಿಗ್‍ಬಾಸ್‍ನಂತಹ ಬೃಹತ್ ರಿಯಾಲಿಟಿ ಶೋ ಬೆನ್ನಲ್ಲೇ `ರಾಧಾ ರಮಣ' ಆರಂಭವಾಯಿತು. 
 
ಇದರ ಸೊಬಗನ್ನು ವೀಕ್ಷಕರು ಸವಿಯುತ್ತಿರುವಾಗಲೇ ಕಲರ್ಸ್ ಕನ್ನಡ ಇದೀಗ `ಪದ್ಮಾವತಿ' ಎಂಬ ಇನ್ನೊಂದು ಹೊಸ ಕತೆಯೊಂದಿಗೆ ವೀಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈ ಹೊಸ ಧಾರಾವಾಹಿ ಫೆಬ್ರವರಿ 06 ರಿಂದ ರಾತ್ರಿ 9:30ಕ್ಕೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ.   
 
`ಪದ್ಮಾವತಿ' ಧಾರಾವಾಹಿಯು ತುಳಸಿ ಮತ್ತು ಸಾಮ್ರಾಟನ ಸುತ್ತ ಸಾಗುವ ಕತೆ. ಕಥಾನಾಯಕಿ ತುಳಸಿ ಹಳ್ಳಿಯಲ್ಲಿ ಬೆಳೆದ ಮುಗ್ದಮನಸ್ಸಿನ ಸ್ಪುರದ್ರೂಪಿ ಹುಡುಗಿ, ಇಷ್ಟದೇವತೆ ಪದ್ಮಾವತಿಯೊಡನೆ ಅವಿನಾಭಾವ ಸಂಬಂಧ ಹೊಂದಿದ ತರುಣಿ. 
 
ಕಥಾನಾಯಕ ಸಾಮ್ರಾಟ ಒಬ್ಬ ಸೂಪರ್ ಸ್ಟಾರ್, ಹೃದಯವಂತ, ತನ್ನ ಕುಟುಂಬವನ್ನು ಪ್ರೀತಿಸುವ ಜವಾಬ್ದಾರಿಯ ಹುಡುಗ. ಆದರೆ ನಾಸ್ತಿಕ. ಈ ಆಸ್ತಿಕ ಮತ್ತು ನಾಸ್ತಿಕರ ಮಧ್ಯೆ ಬೆಳೆಯುವ ಸಂಬಂಧದ ಕತೆ ಪದ್ಮಾವತಿ.
 
ಕಲರ್ಸ್ ಕನ್ನಡ ಹಾಗೂ ಸೂಪರ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳುವಂತೆ, "ನಮ್ಮ ವಾಹಿನಿಯು ಸಾಕಷ್ಟು ಹೊಸ ಕತೆಗಳನ್ನು ವೀಕ್ಷಕರಿಗೆ ಮನ ಮುಟ್ಟುವಂತೆ ತಲುಪಿಸಿದೆ. ಜನ್ಮ ಜನ್ಮಾಂತರದ ಸಂಬಂಧಗಳಲ್ಲಿ ನಂಬಿಕೆ ಇಡುವ, ದೇವರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ 
 
ಮುಗ್ದಮನಸ್ಸಿನ ತುಳಸಿಯ ಕತೆ `ಪದ್ಮಾವತಿ'. ನಾವು ಇಲ್ಲಿಯವರೆಗೂ ನೀಡದ ರೀತಿಯ ಫ್ರೆಶ್ ಕತೆ ಇದು. ಬಿಗ್‍ಬಾಸ್ ನಂತರ ಪ್ರೈಮ್ ಟೈಮ್‍ನಲ್ಲಿ ಪ್ರಸಾರ ಮಾಡುವ `ಪದ್ಮಾವತಿ' ಧಾರಾವಾಹಿಯನ್ನು ನಮ್ಮ ವೀಕ್ಷಕರು ಸ್ವೀಕರಿಸುತ್ತಾರೆ ಎಂಬುದು ನಮ್ಮ ನಂಬಿಕೆ."  
 
ವಾಹಿನಿಯ ಫಿಕ್ಷನ್ ಹೆಡ್ ಹಾರೀಸ್ ಅಭಿಪ್ರಾಯದಂತೆ, "ಕೆಲವು ಕತೆಗಳು ಸಾರ್ವಕಾಲಿಕ. ಉದಾಹರಣೆಗೆ ದೇವರ ಮೇಲಿನ ಭಕ್ತಿ, ಮದುವೆ ಮುಂತಾದ ಕತೆಗಳನ್ನು ಎಷ್ಟು ನೋಡಿದರೂ ಸಾಕಾಗುವುದಿಲ್ಲ. `ಪದ್ಮಾವತಿ' ಅಂತಹ ಒಂದು ಸಾರ್ವಕಾಲಿಕ ಕತೆ. ಈ ಕತೆ ಸಿದ್ಧಪಡಿಸುವಾಗ ಮತ್ತು ಕತೆಯನ್ನು ಧಾರಾವಾಹಿಯನ್ನಾಗಿ ಮಾಡುವಾಗ ಕಲರ್ಸ್ ಕನ್ನಡದ ನಮ್ಮ ತಂಡ ಬಹಳ ಖುಷಿಪಟ್ಟಿದೆ. ನೋಡುವಾಗ ವೀಕ್ಷಕರು ಕೂಡಾ ಅಷ್ಟೇ ಖುಷಿಪಡುತ್ತಾರೆ ಎಂಬ ವಿಶ್ವಾಸ ನಮ್ಮದು."
 
 
ಪದ್ಮಾವತಿ ದೇವಿಯ ಪರಮ ಭಕ್ತೆಯಾದ ತುಳಸಿ ತನ್ನ ಜೀವನದ ಪ್ರತಿಯೊಂದು ಹೆಜ್ಜೆಗೂ ದೇವಿಯ ಒಪ್ಪಿಗೆ ಬೇಡುವವಳು. ಇದು ಅವಳ ಮದುವೆಯ ವಿಷಯಕ್ಕೂ ಹೊರತಾಗಿಲ್ಲ. ಅವಳನ್ನು ನೋಡಲು ಸಾಕಷ್ಟು ಹುಡುಗರು ಬಂದು ಹೋದರೂ ಅದಕ್ಕೆ ಪದ್ಮಾವತಿಯಿಂದ ಒಪ್ಪಿಗೆ ದೊರೆಯದ ಕಾರಣ ತುಳಸಿಯ ಮದುವೆ ಒಂದು ಸವಾಲಾಗುತ್ತದೆ. 
 
ದೇವರನ್ನೇ ನಂಬುವ ಸಂಪ್ರದಾಯಸ್ಥ ಮನೆತನದ ಹುಡುಗಿ ತುಳಸಿ ಮತ್ತು ಸೂಪರ್ ಸ್ಟಾರ್ ಆಗಿರುವ ನಾಸ್ತಿಕ ಸಾಮ್ರಾಟ್ ಭೇಟಿಯಾಗುತ್ತಾರಾ? ಈ ವೈರುಧ್ಯ ಮನಸುಗಳ ಮಧ್ಯೆ ಸಂಬಂಧ ಬೆಳೆಯುತ್ತದೆಯೇ? ತುಳಸಿ-ಸಾಮ್ರಾಟ್ ಸಂಬಂಧಕ್ಕೆ ಪದ್ಮಾವತಿ ದೇವಿಯ ಒಪ್ಪಿಗೆ ಇದೆಯೇ? 
 
ತುಳಸಿಯ ಜೀವನಕ್ಕೆ ಆರಾಧ್ಯ ದೇವತೆ ಪದ್ಮಾವತಿ ಹೇಗೆ ದಾರಿ ದೀಪವಾಗುತ್ತಾಳೆ ಎಂಬುದರ ಸುತ್ತ ಹೆಣೆದಿರುವ ಕತೆ ಪದ್ಮಾವತಿ. ಕಲರ್ಸ್ ಕನ್ನಡ ವಾಹಿನಿಯ ಕುಲವಧು, ಪುಟ್ಟಗೌರಿ ಮದುವೆ, ಕಿನ್ನರಿ, ಅಗ್ನಿಸಾಕ್ಷಿ, ಅಕ್ಕ, ಲಕ್ಷ್ಮೀ ಬಾರಮ್ಮ, ರಾಧಾ ರಮಣ, ಗಾಂಧರಿ, ಮನೆದೇವ್ರು, ಮಜಾ ಟಾಕೀಸ್, ಬಿಗ್‍ಬಾಸ್, ಸೂಪರ್ ಮಿನಿಟ್, ಅಶ್ವಿನಿ ನಕ್ಷತ್ರ, ಚರಣದಾಸಿ, ಯಶೋಧೆ ಮೊದಲಾದ ಜನಪ್ರಿಯ ಕಾರ್ಯಕ್ರಮಗಳ ಸಾಲಿಗೆ 'ಪದ್ಮಾವತಿ' ಹೊಸದಾಗಿ ಸೇರ್ಪಡೆಯಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ