ಮಹಾನಟಿ ಶೋ, ಅನುಶ್ರೀ, ರಮೇಶ್ ಅರವಿಂದ್ ವಿರುದ್ಧ ದೂರು ದಾಖಲು

Krishnaveni K

ಸೋಮವಾರ, 29 ಏಪ್ರಿಲ್ 2024 (14:47 IST)
Photo Courtesy: Instagram
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಶೋ ಈಗ ವಿವಾದಕ್ಕೆ ಕಾರಣವಾಗಿದೆ. ಶೋನಲ್ಲಿ ಬಳಕೆಯಾಗಿರುವ ಒಂದು ಸಾಲಿನಿಂದಾಗಿ ನಿರೂಪಕಿ ಆಂಕರ್ ಅನುಶ್ರೀ, ತೀರ್ಪುಗಾರರಾದ ರಮೇಶ್ ಅರವಿಂದ್ ಸೇರಿದಂತೆ ವಾಹಿನಿ ವಿರುದ್ಧ ದೂರು ದಾಖಲಾಗಿದೆ.

ಜೀ ಕನ್ನಡದಲ್ಲಿ ವಾರಂತ್ಯದಲ್ಲಿ ಬರುವ ಮಹಾನಟಿ ಎಂಬ ರಿಯಾಲಿಟಿ ಶೋ ಅಭಿನಯ ಆಸಕ್ತ ಯುವತಿಯರಿಗೆ ಒಂದು ವೇದಿಕೆಯಾಗಿದೆ. ಹಲವು ಪ್ರತಿಭೆಗಳನ್ನು ಆಡಿಷನ್ ನಡೆಸಿ ಶೋನಲ್ಲಿ ಆಯ್ಕೆ ಮಾಡಲಾಗಿದೆ. ಇವರಿಗೆ ಪ್ರತೀ ವಾರವೂ ಒಂದೊಂದು ಸವಾಲು ನೀಡಲಾಗುತ್ತದೆ.

ಇದೇ ರೀತಿ ಈ ವಾರ ಶೋನಲ್ಲಿ ಸ್ಕಿಟ್ ಒಂದರಲ್ಲಿ ‘ಮೆಕ್ಯಾನಿಕ್ ನ ಮದುವೆ ಆದರೆ ಗ್ರೀಸ್ ತಿಂದು ಬದುಕಬೇಕಾಗುತ್ತದೆ’ ಎಂದು ಹಾಸ್ಯ ಮಾಡಲಾಗಿದೆ. ಇದು ಮೆಕ್ಯಾನಿಕ್ ಕೆಲಸ ಮಾಡುವವರನ್ನು ಕೀಳಾಗಿ ಚಿತ್ರಿಸಿದಂತೆ ಎಂದು ವಿವಾದಕ್ಕೆ ಕಾರಣವಾಗಿದೆ.  ಈ ಹಿನ್ನಲೆಯಲ್ಲಿ ಚಿಕ್ಕನಾಯಕನಹಳ್ಳಿಯ ಫ್ರೆಂಡ್ಸ್ ದ್ವಿಚಕ್ರವಾಹನ ವರ್ಕ್ ಶಾಪ್ ಮಾಲಿಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಈ ಶೋ ನಿರ್ಮಾಪಕರು, ನಿರ್ದೇಶಕರು, ವಾಹಿನಿ, ನಿರೂಪಕಿ ಅನುಶ್ರೀ, ತೀರ್ಪುಗಾರರಾದ ರಮೇಶ್ ಅರವಿಂದ್, ನಟಿ ಪ್ರೇಮಾ, ಈ ಡೈಲಾಗ್ ಹೇಳಿದ ಗಗನಾ ಎಂಬ ಸ್ಪರ್ಧಿಯ ಹೆಸರುಗಳೂ ಉಲ್ಲೇಖವಾಗಿದೆ. ಇದು ಶ್ರಮಿಕ ವರ್ಗದವರಿಗೆ ಮಾಡಿದ ಕುಹುಕ ಎಂದು ದೂರಿನಲ್ಲಿ ಹೇಳಲಾಗಿದೆ. ಇದಕ್ಕೆ ತಕ್ಷಣವೇ ವಾಹಿನಿಯವರು ಕ್ಷಮೆ ಕೇಳಬೇಕೆಂದು ಕೋರಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ