ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ವರ್ತೂರು ಸಂತೋಷ್ ಗೆ ಸನ್ಮಾನ ಮಾಡಿದ ಕಾರಣಕ್ಕೆ ಪೊಲೀಸ್ ಅಧಿಕಾರಿಯೊಬ್ಬರಿಗೆ ವರ್ಗಾವಣೆ ಶಿಕ್ಷೆ ದೊರೆತಿದೆ.
ಬಿಗ್ ಬಾಸ್ ಶೋನಿಂದ ಜನಪ್ರಿಯರಾದ ವರ್ತೂರು ಸಂತೋಷ್ ಗೆ ಎಲ್ಲೇ ಹೋದರೂ ಜನ ಸನ್ಮಾನ ಮಾಡುತ್ತಿದ್ದಾರೆ. ಅವರೊಂದಿಗೆ ಸೆಲ್ಫೀಗಾಗಿ ಮುಗಿಬೀಳುತ್ತಿದ್ದಾರೆ. ಒಟ್ಟಾರೆಯಾಗಿ ಎಲ್ಲೋ ಮೂಲೆಯಲ್ಲಿ ಕೃಷಿಕನಾಗಿ ಕೆಲವೊಂದು ಜನಕ್ಕೆ ಮಾತ್ರ ಚಿರಪರಿಚಿತರಾಗಿದ್ದ ವರ್ತೂರು ಈಗ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ.
ಪೊಲೀಸ್ ಅಧಿಕಾರಿ ಟ್ರಾನ್ಸ್ ಫರ್
ಇನ್ನು, ಪಿಎಸ್ ಐ ತಿಮ್ಮರಾಯಪ್ಪ ಎಂಬವರು ವರ್ತೂರು ಸಂತೋಷ್ ಗೆ ಸಮವಸ್ತ್ರ ಧರಿಸಿರುವಾಗಲೇ ಶಾಲು ಹಾಕಿ ಪೇಟ ಧರಿಸಿ ಸನ್ಮಾನ ಮಾಡಿದ್ದರು. ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ವರ್ಗಾವಣೆಯ ಶಿಕ್ಷೆ ನೀಡಿದ್ದಾರೆ.
ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ವರ್ತೂರು ಸಂತೋಷ್ ಆರೋಪಿಯಾಗಿದ್ದಾರೆ. ಬಿಗ್ ಬಾಸ್ ಮನೆಯಿಂದಲೇ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಬಳಿಕ ಜಾಮೀನು ಪಡೆದು ಮರಳಿ ಬಿಗ್ ಬಾಸ್ ಮನೆಗೆ ಹೋಗಿದ್ದರು. ಇದೀಗ ಅದೇ ವರ್ತೂರುಗೆ ಸನ್ಮಾನ ಮಾಡಿದ್ದಕ್ಕೆ ಅದೂ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಸನ್ಮಾನ ಮಾಡಿದ್ದಕ್ಕೆ ಅಧಿಕಾರಿಗೆ ಶಿಕ್ಷೆ ವಿಧಿಸಲಾಗಿದೆ.