ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೇಕೆದಾಟು ಪಾದಯಾತ್ರೆಯ ಕೊನೆ ದಿನ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾಳೆ ಬಜೆಟ್ ಅಧಿವೇಶನ ಇರುವುದರಿಂದ ನಮ್ಮ ಪಾದಯಾತ್ರೆಯನ್ನು ಎರಡು ದಿನ ಕಡಿತಗೊಳಿಸಿ ಇಂದೇ ಮುಕ್ತಾಯಗೊಳಿಸುತ್ತಿದ್ದೇವೆ. ರಾಮನಗರದಿಂದ ಬೆಂಗಳೂರಿನವರೆಗೆ ನಮ್ಮ ಪಾದಯಾತ್ರೆಗೆ ಜನ ಅತಿ ಹೆಚ್ಚು ಬೆಂಬಲ ನೀಡಿದ್ದಾರೆ. ನಮ್ಮೊಂದಿಗೆ ನಿಂತ ಎಲ್ಲರಿಗೂ ಪಕ್ಷದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ.
ಶಿವರಾತ್ರಿ ದಿನ ಜನ ಕಡಿಮೆ ಸೇರಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಅಂದೇ ಅತಿ ಹೆಚ್ಚು ಜನ ಸೇರಿದ್ದರು. ಅಂದರೆ ಹೋರಾಟದ ಮಹತ್ವ ರಾಜ್ಯದ ಜನರಿಗೆ ಅರ್ಥವಾಗಿದೆ ಎಂದರ್ಥ. ಕಾಂಗ್ರೆಸ್ ಅವರು ತೂಕ ಇಳಿಸಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ, ಬೆಂಗಳೂರು ನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮಾಡುತ್ತಿದ್ದಾರೆ.
ರಾಜಕೀಯ ಕಾರಣಕ್ಕೆ ಮಾಡುತ್ತಿದ್ದಾರೆ ಎಂಬೆಲ್ಲಾ ಟೀಕೆಗಳನ್ನು ಬಿಜೆಪಿ ಅವರು ಮಾಡಿದ್ದರು. ಆ ಎಲ್ಲ ಟೀಕೆಗಳಿಗೆ ಜನರೇ ಉತ್ತರ ನೀಡಿದ್ದಾರೆ ಎಂದರು.