ಬೆಂಗಳೂರು : ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಎಐಸಿಸಿ ವಕ್ತಾರೆ ಹಾಗೂ ನಟಿ ಖುಷ್ಬೂ ಅವರು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಕ್ಷಣವೂ ಮಹಿಳೆಯರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ತಂದೆಯ ಸಾವಿಗೆ ಸಂಬಂಧಿಸಿದ ವೈದ್ಯಕೀಯ ವರದಿ ಬಂದಿದೆ. ಆದರೆ, ಈ ಬಗ್ಗೆ ಬಿಜೆಪಿ ನಾಯಕರ ಪೈಕಿ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಕಾಶ್ಮೀರದ ಕಥುವಾ ಪ್ರಕರಣ, ಸೂರತ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತಿದೆ. ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು, ಬಿಜೆಪಿ ಶಾಸಕ ಕುಲ್‌ದೀಪ್ ಸೆನೆಗರ್ ವಿರುದ್ಧ ಎಫ್‌ಐಆರ್ ಹಾಕದೆ, ಸಂತ್ರಸ್ತೆಯ ತಂದೆಯನ್ನೆ ಪೊಲೀಸ್ ಠಾಣೆಯಲ್ಲಿ ಕೊಲ್ಲಲಾಗಿದೆ. ಆದರೂ, ಬಿಜೆಪಿ ನಾಯಕರು ಆರೋಪಿಗಳ ಪರ ನಿಂತಿರುವುದು ನಾಚಿಕೆಗೇಡು ಎಂದು ಖುಷ್ಬೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ