ಬೆಂಗಳೂರು ಬಂದ್ ವಾಪಸ್ : ಸರ್ಕಾರದಿಂದ ಬೇಡಿಕೆ ಈಡೇರಿಸುವ ಭರವಸೆ

ಮಂಗಳವಾರ, 12 ಸೆಪ್ಟಂಬರ್ 2023 (09:19 IST)
ಬೆಂಗಳೂರು : ಖಾಸಗಿ ಬಸ್ಗಳನ್ನ ಶಕ್ತಿಯೋಜನೆ ವ್ಯಾಪ್ತಿಗೆ ತರಬೇಕು, 3.64 ಲಕ್ಷ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ರೂ. ನೀಡಬೇಕು, ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನ ಆಗ್ರಹಿಸಿ ಬೆಂಗಳೂರು ಬಂದ್ಗೆ ಕರೆ ನೀಡಿದ್ದ ಖಾಸಗಿ ಸಾರಿಗೆ ಒಕ್ಕೂಟ ಮಧ್ಯಾಹ್ನದ ವೇಳೆಗೆಲ್ಲಾ ಬಂದ್ ವಾಪಸ್ ಪಡೆದಿದೆ.
 
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಬೇಡಿಕೆಗಳನ್ನ ಈಡೇರಿಸುವ ಭರವಸೆ ನೀಡಿದ್ದಾರೆ. ಇದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ.

ಸೋಮವಾರ ಮಧ್ಯರಾತ್ರಿ 12 ಗಂಟೆವರೆಗೂ ಇದ್ದ ಬಂದ್ ಮಧ್ಯಾಹ್ನ 3 ಗಂಟೆ ವೇಳೆಗೆ ಕೈಬಿಡಲಾಗಿದೆ. ಇದರಿಂದ ಆಟೋ, ಟ್ಯಾಕ್ಸಿ, ಗೂಡ್ಸ್, ಖಾಸಗಿ ಬಸ್ ಸೇರಿ ವಿವಿಧ ಮಾದರಿಯ ಖಾಸಗಿ ಸಾರಿಗೆಯ ವಾಹನಗಳು ಎಂದಿನಂತೆ ರಸ್ತೆಗಿಳಿದಿದ್ದು, ಬೆಂಗಳೂರಿನ ಜನ ನಿಟ್ಟುಸಿರು ಬಿಡುವಂತಾಗಿದೆ. 

ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, 37 ಸಂಘಟನೆಯವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೀರಿ. ನನ್ನನ್ನೂ ನಿಮ್ಮ ಜೊತೆ ಸೇರಿಸಿಕೊಳ್ಳಿ.

ನಿಮ್ಮ ಬೇಡಿಕೆಗಳಲ್ಲಿ ಶಕ್ತಿ ಯೋಜನೆ ಹಾಗೂ ತೆರಿಗೆ ಎರಡು ಬೇಡಿಕೆ ನಮ್ಮ ಸರ್ಕಾರದಿಂದ ಆಗಿರುವ ಸಮಸ್ಯೆ. ಉಳಿದೆಲ್ಲಾ ಬೇಡಿಕೆಗಳು ಎಲ್ಲಾ ಹಿಂದಿನ ಸರ್ಕಾರದಲ್ಲಿ ಆಗಿರುವುದು. ಆದಾಗ್ಯೂ ಈ ಬೇಡಿಕೆಗಳನ್ನ ಈಡೇರಿಸುವುದಾಗಿ ಹೇಳಿದ್ದೇನೆ, ಈಡೇರಿಸುತ್ತೆನೆ ಎಂದು ಭರವಸೆ ನೀಡಿದ್ದಾರೆ.

ಪ್ರಮುಖ ಬೇಡಿಕೆ ಏನಿತ್ತು?
– ಖಾಸಗಿ ಬಸ್ಗಳನ್ನ ಶಕ್ತಿಯೋಜನೆ ವ್ಯಾಪ್ತಿಗೆ ತರಬೇಕು
– 3.64 ಲಕ್ಷ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ನೀಡಬೇಕು
– ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧ ಮಾಡಬೇಕು
– 10-15 ಲಕ್ಷ ಮೌಲ್ಯದ ವಾಹನಗಳಿಗೆ ಜೀವಿತಾವಧಿ ತೆರಿಗೆ ಬದಲು ಈ ಹಿಂದಿನ ನಿಯಮವೇ ಜಾರಿಗೆ ತರಬೇಕು
– ಏರ್ಪೋರ್ಟ್ ಟ್ಯಾಕ್ಸಿಗಳಿಗೆ ಒಂದೇ ದರ ನಿಗದಿ ಮಾಡಬೇಕು
– ಅಸಂಘಟಿತ ವಾಣಿಜ್ಯ ಚಾಲಕರ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು
– ಚಾಲಕರಿಗೆ ವಸತಿ ಯೋಜನೆ ನೀಡಬೇಕು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ