ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ ನಡೆಯುವ ಚುನಾವಣೆಗೆ ಬಿಜೆಪಿ -ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಉಭಯ ಪಕ್ಷಗಳಲ್ಲಿ ಯಾರಿಗೆ ಮೇಲುಗೈ-ಯಾರಿಗೆ ಹಿನ್ನಡೆ ಅನ್ನುವ ಚರ್ಚೆ ಆರಂಭವಾಗಿದೆ.
ಗೆಲ್ಲಲು ಅವಕಾಶ ಇರುವ ನಾಲ್ಕು ಸ್ಥಾನಗಳಿಗೆ ಬಿಜೆಪಿ ಇಂದು ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರೆ ಕಾಂಗ್ರೆಸ್ ನಿನ್ನೆ ಸಂಜೆ ಪಟ್ಟಿ ಬಿಡುಗಡೆ ಮಾಡಿತ್ತು.
ಬಿಜೆಪಿಯ ಅಭ್ಯರ್ಥಿಯಾಗಲಿದ್ದಾರೆಂದೇ ನಿರೀಕ್ಷೆ ಇದ್ದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿ ವರಿಷ್ಠರು ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ಭವಿಷ್ಯದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಲ್ಲ ಎನ್ನುವ ಸಂದೇಶ ರವಾನಿಸಿದೆ.
ಇತ್ತೀಚೆಗೆ ಜೈಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಲ್ಲ ಎನ್ನುವ ಸಂದೇಶ ರವಾನಿಸಿದ್ದರು. ಅದರಂತೆ ರಾಜ್ಯದ ಎಲ್ಲಾ ನಾಯಕರ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.