ಸಿಎಂ ಯೋಗಿ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಬಂಪರ್ ಗಿಫ್ಟ್
ಸೋಮವಾರ, 27 ಸೆಪ್ಟಂಬರ್ 2021 (08:24 IST)
ಲಕ್ನೋ : ಸಂಪುಟ ವಿಸ್ತರಣೆಗೂ ಮೊದಲು ಇವತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಬ್ಬು ಬೆಳೆಗಾರರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಇನ್ಮುಂದೆ ಪ್ರತಿ ಕ್ವಿಂಟಲ್ ಕಬ್ಬಿನ ಬೆಲೆ ಮೇಲೆ 25 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ಈಗ ಪ್ರತಿ ಕ್ವಿಂಟಲ್ ಕಬ್ಬು ಬೆಲೆ 325 ರಿಂದ 350 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಸರ್ಕಾರದ ನಿರ್ಧಾರದಿಂದ ಕಬ್ಬು ಬೆಳೆಗಾರರ ಆದಾಯ ಶೇ.8ರಷ್ಟು ಏರಿಕೆಯಾಗಲಿದೆ. 45 ಲಕ್ಷಕ್ಕೂ ಅಧಿಕ ರೈತರು ಇದರ ಲಾಭ ಪಡೆಯಲಿದ್ದಾರೆ. ರೈತ ಸಂಘಟನೆಗಳು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ರೆ, ರಾಜಕೀಯ ಪಕ್ಷಗಳು ಚುನಾವಣೆ ಗಿಮಿಕ್ ಎಂದು ವಾಗ್ದಾಳಿ ನಡೆಸಿವೆ. ಎಲ್ಲ ಮಾದರಿಯ ಕಬ್ಬು ಬೆಲೆ ಏರಿಕೆ
ಲಕ್ನೋನಲ್ಲಿ ಆಯೋಜಿಸಲಾಗಿದ್ದ 'ಕಿಸಾನ್ ಸಮ್ಮೇಳನ'ದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಇಷ್ಟು ದಿನ ಪ್ರತಿ ಕ್ವಿಂಟಲ್ 325 ರೂ. ನೀಡಲಾಗುತ್ತಿತ್ತು. ಈಗ ಸರ್ಕಾರ ರೈತರ ಹಿತದೃಷ್ಟಿಯಿಂದ ಪ್ರತಿ ಕ್ವಿಂಟಲ್ ಬೆಲೆಯನ್ನು 350 ರೂ.ಗೆ ಏರಿಕೆ ಮಾಡಿದೆ. ಇದರ ಜೊತೆಗೆ ಸಾಮಾನ್ಯ ಕಬ್ಬಿಗೂ 25 ರೂ. ನೀಡಲಾಗುವುದು. ಮೊದಲಿಗೆ ಸಾಮಾನ್ಯ ತಳಿಯ ಕಬ್ಬು ಪ್ರತಿ ಕ್ವಿಂಟಲ್ 315 ರೂ,ಗೆ ಖರೀದಿಸಲಾಗುತ್ತಿತ್ತು. ರೈತರ ಬಳಿಯಲ್ಲಿ ಉಳಿಯುವ ಅನುಪಯುಕ್ತ ಕಬ್ಬನ್ನು ಸಹ 25 ರೂ. ಏರಿಕೆಯ ಹೊಸ ಬೆಲೆಯಲ್ಲಿಯೇ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಮಹತ್ವದ ಘೋಷಣೆ ಮಾಡಿದ್ದಾರೆ.