ದಸರಾ ಮಹೋತ್ಸವಕ್ಕೆ ದಿನಗಣನೆ; ಅರಮನೆ ಪ್ರವೇಶ ದರ ಏರಿಕೆ ಶಾಕ್!
ಶನಿವಾರ, 25 ಸೆಪ್ಟಂಬರ್ 2021 (12:12 IST)
ಮೈಸೂರು, ಸೆ 25 : ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಮನೆಯಲ್ಲಿ ಪಾರಂಪರಿಕ ದಸರಾ ಸಡಗರ ಸಂಭ್ರಮ ಮನೆ ಮಾಡಿದೆ. ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನಿಗದಿ ಮಾಡಲಾಗಿದ್ದು, ಅರಮನೆ ಕಾರ್ಯಕ್ರಮಗಳ ಪಟ್ಟಿ ಲಭ್ಯವಾಗಿದೆ.
ಕೊರೊನಾ ಸೋಂಕು ಹಿನ್ನೆಲೆ ಈ ಬಾರಿಯೂ ಪಾರಂಪರಿಕ ಜಟ್ಟಿ ಕಾಳಗ ರದ್ದುಗೊಳಿಸಲಾಗಿದೆ. ಕಳೆದ ಬಾರಿಯೂ ಜಟ್ಟಿ ಕಾಳಗವನ್ನು ರದ್ದುಗೊಳಿಸಲಾಗಿತ್ತು. ಅರಮನೆಯಲ್ಲಿ ಅಕ್ಟೋಬರ್ 1ಕ್ಕೆ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಂದು ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರವಾಸಿಗರಿಗೆ ಬೆಲೆ ಏರಿಕೆ ಶಾಕ್
ದಸರಾಗೂ ಮುನ್ನ ಪ್ರವಾಸಿಗರಿಗೆ ಟಿಕೆಟ್ ದರ ಏರಿಕೆ ಶಾಕ್ ನೀಡಲಾಗಿದೆ. ಅರಮನೆ ಪ್ರವೇಶ ದರ ಏರಿಕೆ ಮಾಡಲಾಗಿದ್ದು, ವಯಸ್ಕರಿಗೆ 100 ರೂ., ಮಕ್ಕಳಿಗೆ 50 ರೂ. ನಿಗದಿ ಮಾಡಲಾಗಿದೆ. ಅಗತ್ಯ ವಸ್ತುಗಳ ದರಗಳ ಏರಿಕೆ ಬೆನ್ನಲ್ಲೇ ಅರಮನೆ ಪ್ರವೇಶ ದರ ಏರಿಕೆ ಮಾಡಲು ತೀರ್ಮಾನಿಸಿದ್ದು,
ಇಂದಿನಿಂದಲೇ ದರ ಏರಿಕೆಗೆ ಅರಮನೆ ಮಂಡಳಿ ಆದೇಶ ನೀಡಿದೆ. ಇನ್ನು ಶಾಲಾ ಮಕ್ಕಳಿಗೆ ಹಳೆಯ ದರ 20 ರೂ. ಹೊಸ ದರ 50 ರೂ. ಏರಿಕೆ ಮಾಡಲಾಗಿದೆ. ಆದರೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಬೆಲೆ ಏರಿಕೆ ಮಾಡಿಲ್ಲ.
ಅ.7ರಿಂದ 14ರವರೆಗೂ ಅರಮನೆಯಲ್ಲಿ ದಸರಾ ಕಾರ್ಯಕ್ರಮ ನಡೆಯಲಿದ್ದು, ಅಕ್ಟೋಬರ್ 7ರಿಂದ ಅಕ್ಟೋಬರ್ 15ರವರೆಗೆ ಅರಮನೆಗೆ ಮಧ್ಯಾಹ್ನ 2.30ರವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.